ನಾಗರಹುತ್ತಕ್ಕೆ ಹಾಲೆರೆದು ವಿಶೇಷ ಪೂಜೆ

(ಸಂಜೆವಾಣಿ ವಾರ್ತೆ)
ನವಲಗುಂದ,ಆ21 : ಪಟ್ಟಣದ ಸಿದ್ದಿವಿನಾಯಕ ನಗರ ಹಾಗೂ ಲಕ್ಷ್ಮಿ ಪಾರ್ಕದಲ್ಲಿ ಭಾನುವಾರ ನಾಗಪಂಚಮಿ ಆಚರಣೆಯ ಸಂಭ್ರಮ ಮನೆಮಾಡಿತ್ತು. ವಿವಿಧ ದೇವಸ್ಥಾನಗಳಿಗೆ ತೆರಳಿದ ಮಹಿಳೆಯರು, ಮಕ್ಕಳು ವಿಶೇಷ ಪೂಜೆ ಸಲ್ಲಿಸಿದರು. ನಾಗರ ಹುತ್ತಕ್ಕೆ ಹಾಲೆರೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಭಾನುವಾರ ಸರ್ಕಾರಿ ರಜೆಯೂ ಇದ್ದುದರಿಂದ ಎಲ್ಲೆಡೆ ಜನಜಗುಳಿ ಕಂಡುಬಂದಿತು. ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳು, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು. ಕೆಲವರು ತರಹೇವಾರಿ ಉಂಡೆಗಳನ್ನು ಮನೆಗಳಲ್ಲಿ ಸಿದ್ಧಪಡಿಸಿದರೆ, ಕೆಲವರು ಅಂಗಡಿಗಳಲ್ಲಿ ಕೊಂಡು, ಸವಿದರು. ಹೊಸ ಬಟ್ಟೆಗಳನ್ನು ಧರಿಸಿ ಖುಷಿಪಟ್ಟರು.
ನಗರ ಪ್ರದೇಶವಷ್ಟೇ ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ನಾಗರ ಪಂಚಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮನೆಗಳಲ್ಲಿ ಮಣ್ಣಿನಿಂದ ತಯಾರಿಸಿದ ಹುತ್ತಪ್ಪನಿಗೆ ಭಕ್ತರು ಹಾಲೆರೆದು ನೈವೇದ್ಯ ಅರ್ಪಿಸಿದರು.