ನಾಗರಪಂಚಮಿ ಸಂಭ್ರಮ: ಹುತ್ತಿಗೆ ಹಾಲು, ನೈವೇದ್ಯೆ ಮೂಲಕ ವಿಶೇಷ ಪೂಜೆ

ಕಲಬುರಗಿ:ಆ.02:ಜಿಲ್ಲೆಯಲ್ಲಿ ಎಲ್ಲೆಡೆ ನಾಗರಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ನಾಗಪ್ಪನ ಹುತ್ತಿಗೆ ಹಾಲು ಮತ್ತು ನೈವೇದ್ಯೆ ಅರ್ಪಿಸಿ, ವಿಶೇಷ ಪೂಜೆ ನೆರವೇರಿಸುವ ಮೂಲಕ ಭಕ್ತಿಭಾವ ಮೆರೆದರು.
ನಗರದ ವಿವಿಧೆಡೆ ಇರುವ ನಾಗರ ಹುತ್ತಗಳಿಗೆ ಪ್ರಕೃತಿಯ ಆರಾಧನೆಯಾಗಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಹಾಲು ಎರೆದರು. ನೈವೇದ್ಯ ಅರ್ಪಿಸಿದರು. ನಗರದ ಕೋರಂಟಿ ಹನುಮಾನ್ ದೇವಸ್ಥಾನದ ಹತ್ತಿರ, ಶಕ್ತಿನಗರ, ಶ್ರೀ ಶರಣಬಸವೇಶ್ವರ್ ದೇವಸ್ಥಾನದ ಆವರಣದಲ್ಲಿರುವ ನಾಗ ದೇವತೆಗೆ ಅನೇಕರು ಹಾಲು ಎರೆದು ನೈವೇದ್ಯ ಅರ್ಪಿಸಿದರು.
ಕಳೆದ ಎರಡು ವರ್ಷಗಳು ಕೋವಿಡ್ ಕಾರಣದಿಂದಾಗಿ ನಾಗರಪಂಚಮಿಯನ್ನು ಶೃದ್ಧಾ ಭಕ್ತಿಯಿಂದ ಆಚರಿಸಲು ಅಡಚಣೆಯಾಗಿತ್ತು. ಈಗ ಕೋವಿಡ್ ನಿಯಂತ್ರಣದಿಂದಾಗಿ ನಾಗಪಂಚಮಿಯನ್ನು ಸಡಗರ, ಸಂಭ್ರಮಗಳಿಂದ ಆಚರಿಸಿದರು. ವಿವಿಧೆಡೆ ಜೋಕಾಲಿಗಳನ್ನು ಜೀಕಿ ಬೀಗಿದರು.