ನಾಗಮಾರಪಳ್ಳಿ ಆಸ್ಪತ್ರೆ, ಫೌಂಡೇಶನ್ ಕಾರ್ಯಕ್ಕೆ ನಟ ಶಿವರಾಜಕುಮಾರ ಮೆಚ್ಚುಗೆ

ಬೀದರ್: ಜ.10:ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆಯು ಈ ಭಾಗದ ಜನ ಸಾಮಾನ್ಯರಿಗೆ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುತ್ತಿರುವುದು ಮಾದರಿಯಾಗಿದೆ ಎಂದು ಹೆಸರಾಂತ ಚಿತ್ರನಟ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಇಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬೀದರ್ ಉತ್ಸವ ನಿಮಿತ್ತ ನಗರಕ್ಕೆ ಆಗಮಿಸಿರುವ ಅವರು, ನಾಗಮಾರಪಳ್ಳಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಸ್ಪತ್ರೆಯಲ್ಲಿನ ಚಿಕಿತ್ಸಾ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ರೋಗಿಗಳೊಂದಿಗೆ ಮಾತನಾಡಿದರು. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಹಾಗೂ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಸೇರಿ ಕೋವಿಡ್ ಸಮಯದಲ್ಲಿ ಸಲ್ಲಿಸಿದ ಸೇವೆ ಅನುಪಮವಾಗಿದೆ. ಒಂದೇ ರೂಪಾಯಿಗೆ ಚಿಕಿತ್ಸೆ, ಔಷಧಿ, ಊಟ, ಉಪಹಾರ, ವಸತಿ ಮುಂತಾದ ಸೌಲಭ್ಯಗಳನ್ನು ಒದಗಿಸಿದ ಮತ್ತೊಂದು ಆಸ್ಪತ್ರೆ ಇದ್ದಿರಲಿಕ್ಕಿಲ್ಲ ಎಂದು ಶಿವರಾಜಕುಮಾರ ಶ್ಲಾಘಿಸಿದರು.

ನಾಗಮಾರಪಳ್ಳಿ ಆಸ್ಪತ್ರೆ ಹಾಗೂ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಮಾತನಾಡಿ. ಆಸ್ಪತ್ರೆಯಲ್ಲಿನ ಚಿಕಿತ್ಸಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡಲು ಅತ್ಯಾಧುನಿಕ ಉಪಕರಣಗಳಿವೆ ಎಂದು ತಿಳಿಸಿದರು.

ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಹಾಗೂ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿಸ್ಪೇಷಾಲಿಟಿ ಸಹಕಾರ ಆಸ್ಪತ್ರೆಯಿಂದ ವಿಶೇಷ ಚಿಕಿತ್ಸೆ ನೀಡಲಾಗಿದೆ. ಕೋವಿಡ್ ಚಿಕಿತ್ಸಾ ಕೇಂದ್ರ ಆರಂಭಿಸಿ ಒಂದೇ ರೂಪಾಯಿಯಲ್ಲಿ ಉಪಹಾರ, ಊಟ, ಚಿಕಿತ್ಸೆ, ಔಷಧಿ ಒದಗಿಸಲಾಗಿದೆ ಎಂದು ಸೂರ್ಯಕಾಂತ್ ನಾಗಮಾರಪಳ್ಳಿ ತಿಳಿಸಿದರು.

ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ನಾಗಮಾರಪಳ್ಳಿ ಫೌಂಡೇಶನ್‍ನಿಂದ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗಿತ್ತು. ಆಯಾ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಗೌರವಪೂರ್ಣ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದರು.

ಕೋವಿಡ್ ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡ ಸಾವಿರಾರು ಪರಿವಾರಗಳಿಗೆ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್‍ನಿಂದ ಫುಟ್ ಕಿಟ್ ವಿತರಿಸಲಾಗಿದೆ. ವಿವಿಧ ಇಲಾಖೆಗಳ ಸಿಬ್ಬಂದಿಗೆ ಮಾಸ್ಕ್ ವಿತರಣೆ ಮಾಡಲಾಗಿದೆ. ಬೀದರ್ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದರು.

ಸರಕಾರದ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನವನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ಫೌಂಡೇಶನ್ ಮಾಡುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಗಳನ್ನು, ಆಯುಷ್ಮಾನಭಾರತ ಆರೋಗ್ಯ ಕರ್ನಾಟಕ ಯೋಜನೆಯ ಸವಲತ್ತುಗಳನ್ನು ಮನೆ ಮನೆಗೆ ತೆರಳಿ, ಅರ್ಹರ ದಾಖಲೆಗಳನ್ನು ಅಪ್‍ಲೋಡ್ ಮಾಡಿ, ಮಂಜೂರಾತಿ ಪತ್ರಗಳನ್ನು ತಲುಪಿಸಲಾಗುತ್ತಿದೆ. ಸಾವಿರಾರು ಜನರನ್ನು ಆಯುಷ್ಮಾನ್ ಭಾರತ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಸೂರ್ಯಕಾಂತ್ ನಾಗಮಾರಪಳ್ಳಿ ಅವರು ನಟ ಶಿವರಾಜಕುಮಾರ ಅವರಿಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ದಿವ್ಯಾಂಗಚೇತನರಿಗೆ ವ್ಹೀಲ್‍ಚೇರ್‍ಗಳನ್ನು ಕೊಡುಗೆಯಾಗಿ ನೀಡಲಾಯಿತು. ಮಾಜಿ ಶಾಸಕ ಅಶೋಕ ಖೇಣಿ, ಡಾ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ನಿರ್ದೇಶಕ ತರುಣ್ ಸೂರ್ಯಕಾಂತ್ ನಾಗಮಾರಪಳ್ಳಿ, ಆಸ್ಪತ್ರೆಯ ಸಿಇಒ ಎನ್. ಕೃಷ್ಣಾರೆಡ್ಡಿ, ಚಿತ್ರ ನಿರ್ಮಾಪಕ ಶ್ರೀಕಾಂತ್, ಶಂಕರ ಪಾಟೀಲ್ ಅತಿವಾಳ್, ಸಂಗಮೇಶ ಪಾಟೀಲ್, ವೀರಶೆಟ್ಟಿ ಪಟ್ನೆ, ಶೈಲೇಶ ತಡಕಲ್, ಶಾಂತು ಹಳ್ಳದಕೇರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಗರಾಜ ಮಠ್, ಬ್ರಿಮ್ಸ್‍ನ ಜಿಲ್ಲಾ ವಿಕಲಚೇತನರ ಪುನರ್‍ವಸತಿ ಕೇಂದ್ರದ ಸಂಜು ಕೋರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.