ನಾಗದೇವತೆಗೆ ಹಾಲೆರದು ಸಂಭ್ರಮಿಸಿದ ಮಹಿಳೆಯರು

(ಸಂಜೆವಾಣಿ ವಾರ್ತೆ)
ಹುಮನಾಬಾದ: ಆ.2:ಹುಮನಾಬಾದ:ಪಟ್ಟಣ ಶಿವಪೂರ ಬಡಾವಣೆಯಲ್ಲಿರುವ ಐತಿಹಾಸಿಕ ದೇವಸ್ಥಾನವಾದ ಶ್ರೀ ನಾಗನಾಥ ದೇವರ ವಿಶೇಷ ಪೂಜೆಯನ್ನು ದೇವಸ್ಥಾನದ ಅಧ್ಯಕ್ಷರಾದ ಸುರೇಶರೆಡ್ಡಿ ನೆರವೇರಿಸಿದರು. ಉಪಾಧ್ಯಕ್ಷರಾದ ಹಣಮಂತ ಪವಾರ, ಸತೀಷ ಪವಾರ, ಸಂತೋಷ ಪರೀಟ್, ಮನೋಹರ ಭಂಡಾರಿ, ಮಧುರ ಭಂಡಾರಿ, ರಮೇಶ ನಾರಾಯಣ ಪೇಟಕರ್, ಪವನರೆಡ್ಡಿ ಪಾವಡೇ, ಜಗನಾಥ ಧುಮಾಳೆ, ಗುರುರಾಜ ಸ್ವಾಮಿ, ಬಾಬುರಾವ ಪರೀಟ್ ಹಾಗೂ ಇನ್ನಿತರರು ಭಕ್ತಾಧಿಗಳಿದ್ದರು. ದೇವಸ್ಥಾನದಲ್ಲಿ ಇಡೀ ರಾತ್ರಿ ಭಜನೆ ಕೀರ್ತನೆ ಹಾಗೂ ವಿವಿಧ ಸಂಸ್ಕøತಿಕ ಕಾರ್ಯಕ್ರಮಗಳನ್ನು ಜರುಗಿದ್ದವು. ಸಾಂಪ್ರದಾಯಿಕ ಹಬ್ಬವಾದ ನಾಗರ ಪಂಚಮಿ ದಿನವಾದ ಮಂಗಳವಾರದಂದು ಮಹಿಳೆಯರು ಮಕ್ಕಳು ನಗರದ ನಾಗರ ಕೆರೆ ದಡದ ನಾಗದೇವತೆ ಕಟ್ಟೆಗೆ ತೆರಳಿ ಕೊಬ್ಬರಿಯ ಬಟ್ಟಲಿನಲ್ಲಿ ಹಾಲೇರೆದು ನೈವೇದ್ಯ ಸಮರ್ಪಿಸಿ ದರ್ಶನ ಪಡೆದು ಸಂಭ್ರಮಿಸಿದರು.
ನಾಗ ಪಂಚಮಿ ಹಬ್ಬ ಅಂಗವಾಗಿ ಮಹಿಳೆಯರು ವಾರ ಮೊದಲೇ ವಿವಿಧ ಖಾದ್ಯ ಪದಾರ್ಥ ಸಿಹಿ ತಿನಿಸುಗಳನ್ನು ತಯ್ಯಾರಿ ಮಾಡಿಕೊಂಡು, ಬೆಲ್ಲದ ಹಾಲೆರೆದು ಬಿಳಿ ಹಾಲೆರೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.
ಪಂಚಮಿ ಹಬ್ಬವೆಂದರೆ ಮಹಿಳೆಯರಲ್ಲಿ ಎಲ್ಲಿಲ್ಲದ ಸಡಗರ ಸಂಭ್ರಮ. ಮಕ್ಕಳಿಗೂ ಅಷ್ಟೆ ಮನೆಯಲ್ಲಿ ತಯಾರಿಸಿದ ವಿವಿಧ ಬಗೆ ಬಗೆಯ ತಿಂಡಿ ತಿನಿಸು ತಿನ್ನುವದರೊಂದಿಗೆ ಉಯ್ಯಾಲೆ ಆಡುವ ಮೂಲಕ ಮಕ್ಕಳು, ಯುವತಿಯರು, ಮಹಿಳೆಯರು ಸಂಭ್ರಮಿಸುತ್ತಿರುವದು ಕಂಡು ಬಂದಿತು.
ಬೆಳಗ್ಗೆಯಿಂದಲೇ ಮಹಿಳೆಯರು ನಗರದ ಆಯಾ ಬಡಾವಣೆ ಸಮೀಪದಲ್ಲಿರುವ ನಾಗ ದೇವತೆ ಕಟ್ಟೆ, ಗುಡಿಗಳಿಗೆ ತೆರಳಿ ನೈವೇದ್ಯ ಅರ್ಪಿಸಿ, ಹಾಲೆರೆಯವುದು ಕಂಡು ಬಂದಿತು. ಸಂಜೆ ನೆರೆ ಹೊರೆಯವರಿಗೆ ರವೆ ಉಚಿಡಿ, ಕರ್ಚಿಕಾಯಿ, ಶಂಕರ ಪಾಳ್ಯ, ಚಕಲಿ, ಮಂಡಕ್ಕಿ ಚುಡುವಾ ಇತರೆ ತಿಂಡಿ ತಿನಿಸುಗಳನ್ನು ಪರಸ್ಪರ ಹಂಚುವ ಮೂಲಕ ಯುವತಿಯರು, ಮಕ್ಕಳು ಹೊಸ ಬಟ್ಟೆ, ಹೊಸ ಹೊಸ ಸೀರೆಗಳನ್ನು ತೊಟ್ಟು ಒಡವೆಗಳನ್ನು ಧರಿಸಿ ಸಿಂಗರಿಸಿಕೊಂಡು ಪರಸ್ಪರ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.