
ಸಂಜೆವಾಣಿ ವಾರ್ತೆ
ಗಂಗಾವತಿ, ಅ.20: ಶ್ರಾವಣದಲ್ಲಿ ಬರುವ ಹಬ್ಬಗಳಿಗೆ ಮುನ್ನುಡಿ ಬರೆವಂತ ವಿಶೇಷ ಹಬ್ಬ ನಾಗರ ಪಂಚಮಿ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ನಗರದ ನೀಲಕಂಠೇಶ್ವರ ದೇಗುದ ಪುರಾತನ ಬಾವಿ ಹತ್ತಿರ ಇರುವ ನಾಗದೇವತೆಗಳಿಗೆ ನೈವೇದ್ಯ ,ಎಳ್ಳುಂಡಿ,ಸಜ್ಜೆ, ಗೋಧಿ,ಶೇಂಗಾದುಂಡಿ ಸೇರಿ ವಿವಿಧ ಬಗೆಯ ಕಾಳುಗಳನ್ನಿಟ್ಟು ಕುಟುಂಬ ಹಾಗೂ ತಮ್ಮ ಆತ್ಮೀಯರ ಹೆಸರು ಹೇಳಿ ಹಾಲು ಹಾಕಲಾಯಿತು.
ನಗರದ ಶ್ರೀ ಚನ್ನಬಸವಸ್ವಾಮಿಮಠ,ಈರಣ್ಣನ ಗುಡಿ,ಹಿರೇಜಂತಗಲ್ ಪ್ರಸನ್ನ ವಿರೂಪಾಕ್ಷೇಶ್ವರ,ಮುಡ್ಡಾಣೇಶ್ವರ, ಜುಲೈನಗರ ರಾಮಲಿಂಗೇಶ್ವರ ಗುಡಿಗಳಲ್ಲಿ ಇರುವ ನಾಗದೇವತೆ ಮಹಿಳೆಯರು ಹಾಲನೆರೆದು ಪೂಜೆ ಮಾಡಿದರು.
ಇನ್ನು ಕಲ್ಯಾಣ-ಉತ್ತರ ಕರ್ನಾಟಕದಲ್ಲಿ ಈ ಹಬ್ಬ ಮತ್ತಷ್ಟು ವಿಶಿಷ್ಟವಾಗಿರುತ್ತದೆ. ಈ ಹಬ್ಬದಲ್ಲಿ ಮನೆಗಳಲ್ಲಿ ಮತ್ತು ಊರಿನಲ್ಲಿ ಜೋಕಾಲಿ ಕಟ್ಟಿ ಹಾಡುವಂತಹ ವಿಶಿಷ್ಟ ಪದ್ಧತಿ ಇದೆ. ಹಿರಿಯರು ಕಿರಿಯರು ಭೇದವಿಲ್ಲದೇ ಜೋಕಾಲಿ ಹಾಡುತ್ತಾರೆ. ನಾಗರಪಂಚಮಿ ಹಬ್ಬ ಉತ್ತರ ಕರ್ನಾಟಕ ಭಾಗದಲ್ಲಿ ಜೋಕಾಲಿ ಹಬ್ಬವೆಂದು ಪ್ರಸಿದ್ಧಿ ಪಡೆದಿದೆ.
ನಾಗ ಪೂಜೆ ಮಾಡಿ ಸುಬ್ರಮಣ್ಯನನ್ನು ಆರಾಧನೆ ಮಾಡಿದರೆ ನಮ್ಮ ಇಡೀ ಕುಟುಂಬವನ್ನು ನಾಗಪ್ಪ ಕಾಯ್ತಾನೆ ಎಂಬ ನಂಬಿಕೆ ಇದೆ.