ನಾಗತಿಬಸಾಪುರ ಸಾಯಿ ಸನ್ನಿಧಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ : ಸೆ,1- ತಾಲೂಕಿನ ನಾಗತಿಬಸಾಪುರದ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಜರುಗಿತು.
ಬೆಳೀಗ್ಗೆ ಸಾಯಿಬಾಬಾ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಗಣೇಶ ಹಾಗೂ ನವಗ್ರಹ ಪೂಜೆಯೊಂದಿಗೆ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಭಕ್ತರು ಸಾಮೂಹಿಕವಾಗಿ ನೆರವೇರಿಸಿದರು. ನಂತರ ಸತ್ಯನಾರಾಯಣ ಪೂಜಾ ಕತೆಯನ್ನು ಪಠಣ ಮಾಡಲಾಯಿತು. ಅರ್ಚಕ ಶ್ರೀಧರ್ ಪೌರೋಹಿತ್ಯ ನೆರವೇರಿಸಿದರು. ಭಕ್ತರು ಭಕ್ತಿಭಾವದಿಂದ ಪೂಜೆಯಲ್ಲಿ ಭಾಗವಹಿಸಿದ್ದರು.
ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕೊಂಬಳಿ ಚೌಕಿಮಠದ ಸದ್ಗುರು ಗಾಡಿತಾತಾ ಮಾತನಾಡಿ, ಆಧುನಿಕ ಒತ್ತಡದ ಬದುಕಿನಲ್ಲಿ ಸಿಲುಕಿರುವ ಮನುಷ್ಯ ಕೇವಲ ಲೌಖಿಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಭಗವಂತನನ್ನು ಆರಾಧನೆ ಮಾಡುವುದರಿಂದ ಯಾವುದೇ ಫಲವಿಲ್ಲ. ಆತ್ಮೋದ್ಧಾರಕ್ಕಾಗಿ ಭಗವಂತನನ್ನು ಧ್ಯಾನಿಸಿದರೆ ಶಾಶ್ವತವಾದ ಸುಖ ಲಭಿಸುತ್ತದೆ ಎಂದು ಹೇಳಿದರು.
ಸಾಯಿ ಸೇವಕರಾದ ಎಂ.ನಿಂಗಪ್ಪ ಮಾತನಾಡಿ, ಭಕ್ತರ ಅಪೇಕ್ಷೆ ಮೇರೆಗೆ ಸಾಯಿ ಸನ್ನಿಧಿಯಲ್ಲಿ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಆರಂಭಿಸಿದ್ದು, ಪ್ರತಿ ಹುಣ್ಣಿಮೆ ದಿನದಂದು ಪೂಜಾ ಕಾರ್ಯಕ್ರಮ ನೆರವೇರಲಿದೆ. ಆಸಕ್ತ ಭಕ್ತರು ಪೂಜಾ ಕಂಕೈರ್ಯದಲ್ಲಿ ಪಾಲ್ಗೊಂಡು ಸ್ವಾಮಿಗೆ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.
ಸಾಯಿ ಸೇವಕರಾದ ಸಂತೋಷ, ಮಲ್ಲಿಕಾರ್ಜುನ, ಶರಣಪ್ಪ, ಹಾಲಶೇಖರ, ಗಿರಿರಾಜ, ಬಸವನಗೌಡ, ರಾಜಶೇಖರ, ಸೋಮಣ್ಣ ಇತರರು ಇದ್ದರು. ಪ್ರಕಾಶ ಜೈನ್, ಶ್ರೀಲತಾ ಅವರು ಭಕ್ತಿಗೀತೆ ಹಾಡಿದರು.