ನಾಗಣಸೂರ ವಿರಕ್ತಮಠದ ಜಗದ್ಗುರು ಬಸವಲಿಂಗ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ

ಕಲಬುರಗಿ,ಅ.15-ಕರ್ನಾಟಕದ ಗಡಿನಾಡ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಸುಕ್ಷೇತ್ರ ನಾಗಣಸೂರ ತುಪ್ಪಿನ ವಿರಕ್ತಮಠದಲ್ಲಿ ಜಗದ್ಗುರು ಬಸವಲಿಂಗ ಶಿವಯೋಗಿಗಳ 91ನೇ ಪುಣ್ಯ ಸ್ಮರಣೋತ್ಸವದ ನಿಮಿತ್ಯವಾಗಿ ಅನೇಕ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗುವವು. ಶ್ರೀಮಠದ ಒಡೆಯರಾದ ಡಾ.ಅಭಿನವ ಬಸವಲಿಂಗ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಇಂದಿನಿಂದ ಮಹಾದಾಸೋಹೀ ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನವನ್ನು ಸುಂಟನೂರ ಸಂಸ್ಥಾನ ಹಿರೇಮಠದ ಪ್ರವಚನ ರತ್ನ ಬಂಡಯ್ಯ ಶಾಸ್ತ್ರಿಗಳು ಮತ್ತು ಕಲಾವಿದರಾದ ವೀರಭದ್ರಯ್ಯ ಗವಾಯಿಗಳು ಕಟ್ಟಿಸಂಗಾವಿ, ತಬಲಾ ವಾದಕರಾದ ರಮೇಶ ಕಟ್ಟಿಸಂಗಾವಿ ಅವರ ಸಾಹಿತ್ಯ ಸಂಗೀತದೊಂದಿಗೆ ಪ್ರಾರಂಭಗೊಂಡು ಅ 25 ವರೆಗೆ ಜರಗುವುದು. 26 ರಂದು ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ ಅವರ ಸಾರಥ್ಯದಲ್ಲಿ ಗಡಿನಾಡ ಗಾನ ಕೋಗಿಲೆ ರಾಜ್ಯ ಮಟ್ಟದ ಗಾಯನ ಸ್ಪರ್ಧೆ ಜರುಗುವುದು. 27 ರಂದು ಜಗದ್ಗುರು ಬಸವಲಿಂಗೇಶ್ವರ ಪ್ರಶಸ್ತಿ ವಿಶೇಷವಾಗಿ ಸಂಗೀತ ಕಾಶಿ ಗದಗ ವೀರೇಶ್ವರ ಪುಣ್ಯಾಶ್ರಮದ ಒಡೆಯರಾದ ಡಾ. ಕಲ್ಲಯ್ಯ ಅಜ್ಜನವರನ್ನು ಒಳಗೊಂಡು ಒಟ್ಟು ಐದು ಜನರಿಗೆ ಪ್ರಶಸ್ತಿ ಪ್ರದಾನ ಹಾಗೂ ಸಾಮೂಹಿಕ ವಿವಾಹ, 1100 ಮುತ್ತೈದರಿಗೆ ಉಡಿ ತುಂಬುವ ಕಾರ್ಯಕ್ರಮ, 7000 ಜಂಗಮರ ಗಣರಾಧನೆ ಮತ್ತು ಧರ್ಮ ಸಭೆ ಜರುಗುವುದು.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶದ ಅನೇಕ ಮಠಗಳ ಮಠಾಧೀಶರು, ಸಂಸದರು, ಶಾಸಕರು, ರಾಜಕೀಯ ಧುರೀಣರು ಶ್ರೀಮಠದ ಭಕ್ತಾದಿಗಳು ಭಾಗವಹಿಸುವರು ಎಂದು ನಾಗಣಸೂರಿನ ತುಪ್ಪಿನ ವಿರಕ್ತಮಠದ ಪ್ರಕಟಣೆ ತಿಳಿಸಿದೆ.