
ವಿಜಯಪುರ:ಮೇ.7: ಜಿಲ್ಲಾ ಸ್ವೀಪ್ ಸಮಿತಿ ಮತ್ತು ತಾಲೂಕು ಸ್ವೀಪ್ ಸಮಿತಿ ವಿಜಯಪುರ ರವರ ವತಿಯಿಂದ ಗ್ರಾಮ ಪಂಚಾಯತಿ ನಾಗಠಾಣ ಅವರ ಸಹಕಾರದಲ್ಲಿ ಶನಿವಾರ ನಾಗಠಾಣ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ ಅವರು ಮಾತನಾಡಿ ಎಲ್ಲರೂ ತಪ್ಪದೇ ಮೇ-10ಕ್ಕೆ ಮತದಾನ ಮಾಡಬೇಕು. ನಮ್ಮ ಒಬ್ಬರ ಮತದಿಂದ ಏನೂ ಆಗುವದಿಲ್ಲ ಎಂಬ ಕೀಳು ಭಾವನೆ ಬಹಳಷ್ಟು ಜನರಲ್ಲಿ ಇದೆ. ಆ ಭಾವನೆ ಬದಲಾಗಬೇಕು ಹನಿ-ಹನಿ ಕೂಡಿದರೇ ಹಳ್ಳ ಎಂಬಂತೆ ಪ್ರತಿಯೊಂದು ಮತವು ತನ್ನದೇ ಆದ ಪಾವಿತ್ರ್ಯತೆಯನ್ನು ಹೊಂದಿದೆ. ದಯವಿಟ್ಟು ಯಾರೂ ಇಂತಹ ಪವಿತ್ರವಾದ ಮತವನ್ನು ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೇ ಕಡ್ಡಾಯವಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಒಂದು ಬಾರಿ ನೀವು ಮತದಾನದಿಂದ ದೂರವಿದ್ದರೇ ಆ ಅವಕಾಶಕ್ಕಾಗಿ ನೀವು ಮತ್ತೇ 05 ವರ್ಷ ಕಾಯಬೇಕಾಗುತ್ತದೆ. ಆದ ಕಾರಣ, ಈಗ ನಿಮಗೆ ಸಿಕ್ಕ ಅವಕಾಶವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಖಾಸಿಂಸಾಬ ಮಸಳಿ ಅವರು ಮಾತನಾಡಿ, ನಿಮ್ಮ ಮತದ ಮಹತ್ವವನ್ನು ನಿಮಗೆ ಅಧಿಕಾರಿಗಳೇ ನಿವಿದ್ದ ಸ್ಥಳಕ್ಕೆ ಬಂದಿದ್ದಾರೆ. ಮತದಾನದ ಮಹತ್ವ ಕುರಿತು ಪ್ರತಿಯೊಬ್ಬರು ಅರಿವು ಹೊಂದಬೇಕು. ಮೇ 10ರಂದು ನಡೆಯುವ ಚುನಾವಣೆಯಲ್ಲಿ ಕಡ್ಡಾಯವಾಗಿ-10ಕ್ಕೆ ತಪ್ಪದೇ ಮತದಾನ ಮಾಡಿ. ಮತದಾನ ಕೇಂದ್ರಗಳಲ್ಲಿ ನಿಮಗೆ ಬೇಕಾದ ವ್ಯವಸ್ಥೆಗಳು ಅಂದರೆ, ನೆರಳು, ಕುಡಿಯುವ ನೀರು, ಆಸನದ ವ್ಯವಸ್ಥೆ ಹೀಗೆ ನಿಮಗೆ ಅವಶ್ಯಕವಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ನೀವು ಭಯವನ್ನು ಬದಿಗಿಟ್ಟು ನಿರ್ಭೀತಿಯಿಂದ ಮತ ಚಲಾಯಿಸಿ ಎಂದರು.
ಈ ಸಂದರ್ಭದಲ್ಲಿ ಕೂಲಿಕಾರರಿಗೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ದತ್ತಾತ್ರೇಯ ಜೋಷಿ ಅವರು ಪ್ರತಿಜ್ಞಾ ವಿಧಿ ಭೋದಿಸಿದರು. ಹಾಗೂ ಕರ್ನಾಟಕ ಆರೋಗ್ಯ ಅಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ಕೂಲಿಕಾರರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಶ್ರೀ ಕಲ್ಲಪ್ಪ ನಂದರಗಿ, ತಾಲೂಕು ಪಂಚಾಯತಿಯ ಶ್ರೀ ರಾಘವೇಂದ್ರ ಭಜಂತ್ರಿ, ಶ್ರೀ ಬಸವರಾಜ ಹುಣಸಗಿ, ಶ್ರೀ ವಿನೋದ ಸಜ್ಜನ, ಶ್ರೀ ರವಿ ಗದ್ದೆಪ್ಪನ್ನವರ, ಅಮೃತಾ ನೀಲಜಗಿ, ಗ್ರಾಮ ಪಂಚಾಯತಿಯ ಸುರೇಖಾ ಹುಣಶ್ಯಾಳ, ಸುರೇಖಾ ಲೋಣಿ ಸೇರಿ ಇತರರು ಹಾಜರಿದ್ದರು.