ನಾಗಠಾಣದಲ್ಲಿ ಸಂಭ್ರಮದ ಚೌಡೇಶ್ವರಿ ದೇವಿಯ ಜಾತ್ರೆ

ವಿಜಯಪುರ,ಜೂ.7: ಬಾದ್ಮಿ ಅಮಾವಾಸ್ಯೆ ನಿಮಿತ್ತ ಗುರುವಾರ ನಾಗಠಾಣದಲ್ಲಿ ಸಡಗರ ಸಂಭ್ರಮದಿಂದ ಚೌಡೇಶ್ವರಿ ದೇವಿಯ ಜಾತ್ರೆ ನೆರವೇರಿತು.
ಜಾತ್ರೆಯ ಆರಂಭಕ್ಕೂ ಮುಂಚೆ ಮಹಿಳೆಯರು ಅಂಬಲಿ ಬಿಂದಿಗೆ ಹೊತ್ತು, ಬಾಸಿಂಗ, ಕಳಸದ ಮೆರವಣಿಗೆಯ ಜೊತೆಗೆ ಗುಡಿ ತಲುಪಿ, ಅಂಬಲಿ ಅರ್ಪಿಸಿದರು. ಅಪಾರ ಸಂಖ್ಯೆಯ ಭಕ್ತರು,ವಾದ್ಯ ಮೇಳದೊಂದಿಗೆ ದೇವಿಯ ಮುಖವಾಡ ಹೊತ್ತವರು ಇಡೀ ಗ್ರಾಮದ ಭಕ್ತರ ಮನೆ ಮನೆಗೆ ಭೇಟಿ ನೀಡಿ, ಕಾಯಿ-ಕರ್ಪೂರದೊಂದಿಗೆ ನೈವೇದ್ಯ ಸ್ವೀಕರಿಸಿ, ಉಡಿ ತುಂಬಿಕೊಂಡು ಆಶೀರ್ವದಿಸುವ ದೃಶ್ಯ ವಿಶೇಷವಾಗಿತ್ತು.
ಚೌಡೇಶ್ವರಿಯು ಅತ್ಯಂತ ಶಕ್ತಿಶಾಲಿ ದೇವತೆಗಳಲ್ಲಿ ಒಬ್ಬಳಾಗಿದ್ದು, ಈಕೆಯ ಬಳಿ ಏನೇ ಬೇಡಿಕೊಂಡರೂ ಅದು ಈಡೇರುತ್ತದೆ ಎನ್ನುವ ನಂಬಿಕೆ ನಾಗಠಾಣ ಗ್ರಾಮದ ಭಕ್ತರಲ್ಲಿ ಈಗಲೂ ಜನಜನಿತವಾಗಿದೆ.
ಕುಂಬಾರ ಮನೆತನದ ಮಹಿಳೆಯರು ಬಜಾರಕ್ಕೆ ಕಿಚಡಿ ತರುವರು.ಅಲ್ಲಿ ಔಡಲ ಕಟ್ಟಿಗೆಯ ಹಂದರದಲ್ಲಿ ಮಜ್ಜಿಗೆ ಕಡಿಯುವಳು. ಅಲ್ಲಿಂದ ನೇರವಾಗಿ ತನ್ನ ಗುಡಿಗೆ ಬಂದು ತಲುಪುವಳು.
ಕುಂಬಾರ ಮನೆತನದ ಭೀಮರಾಯ, ಪವಾಡೇಶ, ಶಿವಾನಂದ, ಅಮೋಘಸಿದ್ದ, ಮಲ್ಲು, ಶರಣು, ಸೋಮನಿಂಗ,ಶ್ರೀಶೈಲ, ಸಿದ್ದು, ಪುಂಡಲೀಕ, ವಿಠಲ, ಬಾಬು, ಮಹಾಂತೇಶ, ನರಸಪ್ಪ, ಹನಮಂತ, ಬಸವರಾಜ, ಪಿಂಟು, ಗಿರಮಲ್ಲ, ಚವಡಪ್ಪ, ಅರವಿಂದ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.