ನಷ್ಟ ಪರಿಹಾರ- ಕೇಂದ್ರಕ್ಕೆ ರಾಜ್ಯ ಮೊರೆ

ಬೆಂಗಳೂರು, ಮೇ ೨೯- ಲಾಕ್‌ಡೌನ್‌ನಿಂದ ಉಂಟಾಗಿರುವ ಆರ್ಥಿಕ ನಷ್ಟಕ್ಕೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಕೇಂದ್ರದಿಂದ ನೆರವಿನ ನಿರೀಕ್ಷೆಯಲ್ಲಿ ರಾಜ್ಯ ಇದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವೀಡಿಯೊ ಮೂಲಕ ನಡೆಸಿದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಲಾಕ್‌ಡೌನ್‌ನಿಂದ ಸಾಕಷ್ಟು ಆರ್ಥಿಕ ನಷ್ಟ ಉಂಟಾಗಿದೆ. ಇದಕ್ಕೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾಗಿ ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಕೇಂದ್ರ ಸರ್ಕಾರಕ್ಕೂ
ರಾಜ್ಯಕ್ಕೆ ಆಗಿರುವ ಆರ್ಥಿಕ ನಷ್ಟದ ಬಗ್ಗೆ ಸಂಪೂರ್ಣ ಅರಿವಿದೆ. ತಜ್ಷರ ಸಮಿತಿ ವರದಿಯಾಧರಿಸಿ ಪರಿಹಾರ ನೀಡಲಿದೆ ಎಂಬ ಭರವಸೆಯನ್ನುಅವರು ವ್ಯಕ್ತಪಡಿಸಿದರು.
ಕಳೆದ ಬಾರಿಯ ಲಾಕ್‌ಡೌನ್‌ನಲ್ಲೂ ಸಾಕಷ್ಟು ನಷ್ಟವುಂಟಾಗಿತ್ತು. ಈ ಬಾರಿಯ ಲಾಕ್‌ಡೌನ್‌ನಿಂದಲೂ ಸಾಕಷ್ಟು ನಷ್ಟ ಆಗಲಿದೆ. ಹಾಗಾಗಿ, ಆರ್ಥಿಕ ಸಂಕಷ್ಟ ಎದುರಾಗಲಿದೆ. ಈ ಸಂಕಷ್ಟದಲ್ಲಿ ಉಂಟಾಗಿರುವ ಆರ್ಥಿಕ ನಷ್ಟ ಪರಿಹಾರ ನೀಡುವಂತೆ ಕೇಂದ್ರ ವಿತ್ತ ಸಚಿವರಲ್ಲಿ ಮನವಿ ಮಾಡಿದ್ದೇನೆ ಎಂದರು. ಲಾಕ್‌ಡೌನ್‌ನಿಂದ ಆಗಿರುವ ಆರ್ಥಿಕ ನಷ್ಟದ ಬಗ್ಗೆ ತಜ್ಞರ ಸಮಿತಿಯಿಂದ ವರದಿ ಪಡೆದು ಕೇಂದ್ರ ಸರ್ಕಾರ ಪರಿಹಾರ ಪ್ರಮಾಣ ನಿಗದಿ ಮಾಡುವ ನಿರೀಕ್ಷೆ ಇದೆ ಎಂದ ಅವರು, ಸಂಕಷ್ಟದಲ್ಲಿ ಕೇಂದ್ರದ ನೆರವಿನ ನಿರೀಕ್ಷೆಯಲ್ಲಿ ಇದ್ದೇವೆ ಎಂದರು.
ರಾಜ್ಯದ ಆರ್ಥಿಕ ಸ್ಥಿತಿಗತಿ, ಲಾಕ್‌ಡೌನ್
ನಿಂದ ಆಗಿರುವ ಆರ್ಥಿಕ ನಷ್ಟ ಎಲ್ಲವನ್ನೂ ಕೇಂದ್ರದ ಗಮನಕ್ಕೆ ತಂದು ಪರಿಹಾರಕ್ಕೆ ರಾಜ್ಯ ಒತ್ತಾಯಿಸಲಿದೆ ಎಂದು ಅವರು ಹೇಳಿದರು. ಜಿಎಸ್‌ಟಿ ಪರಿಹಾರಕ್ಕೂ ಮನವಿ ರಾಜ್ಯದ ಪಾಲಿನ ಜಿಎಸ್‌ಟಿ ಹಣವನ್ನು ನೀಡುವಂತೆ ಸಭೆಯಲ್ಲಿ ಒತ್ತಾಯಿಸಿದ್ದೇನೆ. ೧೧ ಸಾವಿರ ಕೋಟಿ ಜಿಎಸ್‌ಟಿ ಪಾಲು ನೀಡುವಂತೆ ಒತ್ತಡ ಹೇರಲಾಗಿದೆ. ಅದನ್ನು ಕೇಂದ್ರಸರ್ಕಾರ ಶೀಘ್ರವೇ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದರು.
ತನಿಖೆ
ಬೆಂಗಳೂರಿನಲ್ಲಿ ಯುವತಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ನಡೆದಿದ್ದು, ಒಂದೆರೆಡು ದಿನಗಳಲ್ಲಿ ಪ್ರಕರಣದ ಸ್ಪಷ್ಟ ಚಿತ್ರಣ ದೊರಕಲಿದೆ ಎಂದರು.