ನಶೆನಂಟು ಪ್ರಕರಣ: ಆಳ್ವಾ ಕೋರ್ಟಿಗೆ ಮೊರೆ

ಬೆಂಗಳೂರು,ಸೆ.೨೨-ಡ್ರಗ್ ಜಾಲ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಚಿವ ಜೀವರಾಜ ಆಳ್ವ ಪುತ್ರ ಆದಿತ್ಯ ಆಳ್ವ, ತಮ್ಮ ವಿರುದ್ಧದ ಪ್ರಕರಣವನ್ನೇ ಕೈ ಬಿಡುವಂತೆ ಕೋರಿ ನೇರವಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಡ್ರಗ್ ಜಾಲ ಪ್ರಕರಣದ ಸಂಬಂಧ ಸಿಸಿಬಿ ಪೊಲೀಸರ ಬಂಧನದ ರೀತಿಯಲ್ಲಿರುವ ಆದಿತ್ಯ ಆಳ್ವ ತನ್ನ ವಿರುದ್ಧ ಸಲ್ಲಿಸಿರುವ ಪ್ರಕರಣವನ್ನು ಕೈಬಿಡುವಂತೆ ವಕೀಲರ ಮೂಲಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ತನ್ನ ವಿರುದ್ಧದ ಪ್ರಕರಣವನ್ನೇ ಕೈಬಿಡಿ ಎಂದು ಕೋರಿ ಹೈಕೋರ್ಟ್‌ಗೆ ಸಲ್ಲಿಸಿರುವ ಆದಿತ್ಯನ ಅರ್ಜಿ ಈ ವಾರದಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ ಜಾಲ ಕೇಸಿನಲ್ಲಿ ಸ್ಯಾಂಡಲ್‌ವುಡ್‌ನ ‘ಮಾದಕ’ ನಟಿ ರಾಗಿಣಿ ದ್ವಿವೇದಿ, ಬಹುಭಾಷಾ ನಟಿ ಸಂಜನಾ ಗಲ್ರಾನಿ ಜತೆಗೆ ಹಲವು ಡ್ರಗ್ಸ್ ಪೆಡ್ಲರ್‌ಗಳು ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದು ಪ್ರಮುಖ ಆರೋಪಿ ಆದಿತ್ಯ ಆಳ್ವ ಮಾತ್ರ ಸಿಸಿಬಿ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದಾನೆ.
ನಟಿ ಮಣಿಯರಿಬ್ಬರು ಸೇರಿ ಹಲವು ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈತ ಜಾಮೀನು ಅರ್ಜಿ ಸಲ್ಲಿಸುವುದನ್ನು ಬಿಟ್ಟು, ತನ್ನ ವಿರುದ್ಧದ ಪ್ರಕರಣ ರದ್ದು ಮಾಡುವಂತೆ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.
ಸ್ಯಾಂಡಲ್‌ವುಡ್ ಡ್ರಗ್ಸ್ ಲಿಂಕ್ ಪ್ರಕರಣದ ಆರೋಪಿ ಆದಿತ್ಯ ಆಳ್ವ ಮಾಜಿ ಸಚಿವ ಜೀವರಾಜ್‌ರ ಪುತ್ರ. ಹೆಬ್ಬಾಳ ಸಮೀಪ ನಾಲ್ಕು ಎಕರೆಗೂ ಹೆಚ್ಚಿನ ಜಾಗದ ಹೌಸ್ ಆಫ್ ಲೈಫ್ ಹೆಸರಿನಲ್ಲಿ ರೆಸಾರ್ಟ್ ಹೊಂದಿರುವ ಆದಿತ್ಯ, ತಡರಾತ್ರಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಈ ವೇಳೆ ಡ್ರಗ್ ಸರಬರಾಜು ಆಗುತ್ತಿತ್ತು.
ಹಾಗಾಗಿ ಸಿಸಿಬಿ ಪೊಲೀಸರು ಕಳೆದ ಸೆ.೧೫ರಂದು ಈ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದರು. ಈ ನಡುವೆ ಸದಾಶಿವನಗರದಲ್ಲಿರುವ ಆದಿತ್ಯನ ಮನೆಯನ್ನು ಶೋಧ ನಡೆಸಿದ ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿ ಡ್ರಗ್ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಮ್ಯಾನೇಜರ್‌ನನ್ನು ಬಂಧಿಸಿದ್ದಾರೆ.