ನಶೆನಂಟು ನಿರ್ಮಾಪಕ ಶಂಕರಗೌಡ ಸೆರೆ

ಬೆಂಗಳೂರು,ಮಾ.೨೪- ಡ್ರಗ್ಸ್ ಜಾಲ ಪ್ರಕರಣದಲ್ಲಿ ಭಾಗಿಯಾದ ಸ್ಯಾಂಡಲ್‌ವುಡ್ ನಿರ್ಮಾಪಕ ಶಂಕರಗೌಡನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.
ತಡರಾತ್ರಿ ಪಾರ್ಟಿ ಆಯೋಜನೆ ಮಾಡಿ ಡ್ರಗ್ಸ್ ಸರಬರಾಜು ಮಾಡುವುದಲ್ಲದೇ ಡ್ರಗ್ಸ್ ಪೆಡ್ಲರ್ಸ್ ಜೊತೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಶಂಕರಗೌಡರವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗಿದೆ
ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಗಳು ಸೇರಿ ಹಲವರನ್ನು ಇತ್ತೀಚೆಗಷ್ಟೇ ಬಂಧಿಸಿದ್ದ ಪೊಲೀಸರು, ೪ ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು ವಿಚಾರಣೆ ನಡೆಸಲಾಗಿತ್ತು.
ಆರೋಪಿಗಳು ನೀಡಿದ್ದ ಮಾಹಿತಿ ಆಧರಿಸಿ ಬಿಗ್‌ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಮಸ್ತಾನ್ ಚಂದ್ರ ಅವರ ಮನೆ ಹಾಗೂ ನಿರ್ಮಾಪಕ ಶಂಕರಗೌಡ ಕಚೇರಿ ಮೇಲೆ ದಾಳಿ ಮಾಡಿದ್ದರು.
ಪ್ರಕರಣ ಸಂಬಂಧ ಶಂಕರಗೌಡ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸಿದ್ದರು. ಮಾಹಿತಿ ಸಂಗ್ರಹಿಸಿದ ವೇಳೆ ಸೂಕ್ತ ಪುರಾವೆಗಳು ಲಭ್ಯವಾಗಿದ್ದರಿಂದ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.
ಕೆಂಪೇಗೌಡ ಸೇರಿದಂತೆ, ಹಲವು ಸಿನಿಮಾ ನಿರ್ಮಾಣ ಮಾಡಿದ್ದ ಶಂಕರಗೌಡ, ತಮ್ಮದೇ ಕಚೇರಿ ಹಾಗೂ ಇತರೆಡೆ ಪಾರ್ಟಿಗಳನ್ನು ಆಯೋಜಿಸಿ, ಅಲ್ಲಿಗೆ ಬರುತ್ತಿದ್ದ ಅತಿಥಿಗಳಿಗೆ ಡ್ರಗ್ಸ್ ಕೊಡುತ್ತಿದ್ದರು. ಡ್ರಗ್ಸ್ ಖರೀದಿಸಲು ಹಣವನ್ನೂ ನೀಡುತ್ತಿದ್ದರು ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ’
ಕಚೇರಿ ಸಿಬ್ಬಂದಿ ಹೇಳಿಕೆ:
ಪ್ರಕರಣದಲ್ಲಿ ಶಂಕರೇಗೌಡ ಅವರ ಕಚೇರಿಯ ವ್ಯವಸ್ಥಾಪಕ ಹಾಗೂ ಸಿಬ್ಬಂದಿಗೆ ನೋಟಿಸ್ ನೀಡಿದ್ದ ಪೊಲೀಸರು, ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದರು.
ಶಂಕರಗೌಡ ಅವರೇ ಡ್ರಗ್ಸ್ ಸೇವನೆ ಮಾಡುತ್ತಿದ್ದ ಅನುಮಾನ ಪೊಲೀಸರಿಗೆ ಇದೆ. ಶಂಕರಗೌಡ ಅವರನ್ನು ವೈದ್ಯಕೀಯ ಪರೀಕ್ಚೆಗೆ ಒಳಪಡಿಸಲಾಗಿದ್ದು, ಅದರ ವರದಿ ಬರುವುದು ಬಾಕಿ ಇದೆ.