ನಟಿ, ನಿರೂಪಕಿ ಅನುಶ್ರೀಗೆ ನಶೆಯ ನಂಟು?

ಬೆಂಗಳೂರು , ಸೆ 24 – ಸ್ಯಾಂಡಲ್‍ ವುಡ್ ಗೆ ನಶೆಯ ನಂಟು ಪ್ರಕರಣಕ್ಕೆ ಸಂಬಂಧಿಸಿ ನಟಿ, ನಿರೂಪಕಿ ಅನುಶ್ರೀಗೆ ಸಂಕಷ್ಟ ಎದುರಾಗುವ ಲಕ್ಷಣ ಗೋಚರಿಸಿದೆ.

ಡ್ರಗ್ಸ್ ಜಾಲದಲ್ಲಿ ಬಂಧಿತರಾಗಿರುವ ಆರೋಪಿ ಕಿಶೋರ್ ಶೆಟ್ಟಿ ಹಾಗೂ ತರುಣ್ ನೀಡಿರುವ ಮಾಹಿತಿಯ ಆಧಾರದಲ್ಲಿ ಸಿಸಿಬಿ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಡ್ರಗ್ಸ್ ಪೆಡ್ಲಿಂಗ್ ಆರೋಪದಲ್ಲಿ ಮಾಲುಸಹಿತ ಸಿಕ್ಕಿಬಿದ್ದಿರುವ ಕಿಶೋರ್ ಶೆಟ್ಟಿಗೆ ಮಾತ್ರವಲ್ಲದೆ, ಆತನ ಸಹವರ್ತಿ, ಗೆಳೆಯ ತರುಣ್ ಜತೆಗೂ ಆಕೆಯ ನಂಟಿದೆ ಎಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅನುಶ್ರೀ, “ಹತ್ತು ವರ್ಷಗಳ ಹಿಂದಿನ ಡಾನ್ಸ್ ರಿಯಾಲಿಟಿ ಶೋ ನಲ್ಲಿ ತರುಣ್ ಅವರು ನನಗೆ ಕೊರಿಯಾಗ್ರಾಫರ್ ಆಗಿದ್ದರು. ಕಿಶೋರ್ ಶೆಟ್ಟಿ ಸ್ಪರ್ಧಿಯಾಗಿದ್ದರು. ಆಗ ಪರಿಚಯವಾಗಿತ್ತು. ಮೂರು ವರ್ಷಗಳ ಹಿಂದೆ ತರುಣ್ ಅವರ ಡಾನ್ಸ್ ಕ್ಲಾಸ್‍ ಉದ್ಘಾಟಿಸಲು ಹೋಗಿದ್ದೆ. ಆನಂತರ ಅವರೊಂದಿಗೆ ಸಂಪರ್ಕವಿರಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ತರುಣ್ ಮತ್ತು ಕಿಶೋರ್ ಶೆಟ್ಟಿಯ ಜತೆ ಡಾನ್ಸ್ ರಿಯಾಲಿಟಿ ಶೋಗಳು ಹಾಗೂ ನನ್ನಂತೆ ಅವರೂ ಸಹ ಮಂಗಳೂರು ಮೂಲದವರು ಎಂಬ ಕಾರಣಕ್ಕೂ ಚೆನ್ನಾಗಿ ಮಾತನಾಡುತ್ತಿದ್ದೆವು. ಡಾನ್ಸ್ ಅಭ್ಯಾಸ ಮಾಡುತ್ತಿದ್ದೆವು. ಆದರೆ ಆನಂತರ ಅವರ ಬಗ್ಗೆ ತಿಳಿದುಬಂದಿಲ್ಲ ಹಾಗೂ ವ್ಯವಹಾರಗಳ ಅರಿವೂ ಇಲ್ಲ” ಎಂದಿದ್ದಾರೆ.

“ಒಂದು ವೇಳೆ ನನಗೆ ನೋಟಿಸ್ ಬಂದಲ್ಲಿ ಜವಾಬ್ದಾರಿಯುತ ನಾಗರಿಕಳಾಗಿ ಖಂಡಿತ ವಿಚಾರಣೆಗೆ ಹಾಜರಾಗುತ್ತೇನೆ. ನನ್ನ ಬಳಿಯಿರುವ ಮಾಹತಿ ಹಂಚಿಕೊಳ್ಳುತ್ತೇನೆ. ಯಾವುದೇ ತಪ್ಪು ಮಾಡಿಲ್ಲದ ಕಾರಣ ಭಯವೇನೂ ಇಲ್ಲ” ಎಂದು ಅನುಶ್ರೀ ಹೇಳಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಟಿಯರಾದ ರಾಗಿಣಿ, ಸಂಜನಾ ವಿಚಾರಣಾಧೀನ ಕೈದಿಗಳಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಜಾಮೀನಿಗಾಗಿ ಕಾಯುತ್ತಿದ್ದಾರೆ.

ಖ್ಯಾತ ನಿರೂಪಕ ಅಕುಲ್ ಬಾಲಾಜಿ, ತಾರಾ ಜೋಡಿ ದಿಗಂತ್, ಐಂದ್ರಿತಾ ರೇ ಸಿಸಿಬಿ ವಿಚಾರಣೆಗೆ ಮತ್ತು ಕಿರುತೆರೆಯ ನಟ ಅಭಿಷೇಕ್, ನಟಿ ಗೀತಾ ಭಾರತಿ ಭಟ್, ರಶ್ಮಿತಾ ಚಂಗಪ್ಪ ಐಎಸ್‍ಡಿ ವಿಚಾರಣೆಗೆ ಹಾಜರಾಗಿದ್ದಾರೆ. ಸುಮಾರು 30ಕ್ಕೂ ಹೆಚ್ಚು ನಟ, ನಟಿಯರ ಹೆಸರು ಡ್ರಗ್ಸ್ ಜಾಲದಲ್ಲಿ ತಳುಕು ಹಾಕಿಕೊಂಡಿದೆ ಎಂದು ಸಾಮಾಜಿಕ ಕಾರ್ಯಕರ್ತ, ಚಲನಚಿತ್ರ ವಿತರಕ ಪ್ರಶಾಂತ್ ಸಂಬರಗಿ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್‍ ಇತ್ತೀಚೆಗಿನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.