ನಶಿಸುತ್ತಿರುವ ರಂಗಭೂಮಿ ಕಲೆಗೆ ಬೇಕಿದೆ ಚೇತನ : ಶೆಟ್ಟರ್

ಹುಬ್ಬಳ್ಳಿ,ಜು23 : ನಶಿಸುತ್ತ ಸಾಗಿರುವ ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ವಾಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಗುರೂಜಿ ಫೌಂಡೇಶನ್ ಮತ್ತು ನೂಪೂರ ನೃತ್ಯ ವಿಹಾರ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಕಲಾವಿದೆ ಸವಿತಕ್ಕ ಅಭಿನಯಿಸಿದ ಉಧೋ ಉಧೋ ಯಲ್ಲವ್ವ ಏಕವ್ಯಕ್ತಿ ರಂಗಪ್ರಯೋಗವನ್ನು ನಗರದ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ನಾನೂ ಸಹ ಈ ಹಿಂದೆ ರಂಗಕಲಾವಿದನಾಗಿದ್ದೆ ಎಂದು ಸ್ಮರಿಸಿದರಲ್ಲದೇ, ತಮ್ಮ ವಿಭಿನ್ನ ಕಲಾ ಚಾತುರ್ಯದಿಂದ ಸೂಜಿಗಲ್ಲಿನಂತೆ ಸರ್ವರನ್ನೂ ತನ್ನತ್ತ ಸೆಳೆಯುವ ಕಲೆ ಸವಿತಕ್ಕ ಅವರಿಗೆ ಒಲಿದಿದೆ, ರಂಗಭೂಮಿಯನ್ನು ಉಳಿಸಿ ಗತಕಾಲದ ವೈಭವಕ್ಕೆ ತರಲು ಸವಿತಕ್ಕ ನಿರಂತರ ಶ್ರಮಿಸುತ್ತಿದ್ದಾರೆ, ಅವರ ಪ್ರಯತ್ನಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಬಸವೇಶ್ವರ ಗ್ರಾಮೀಣ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಶರಣಪ್ಪ ಕೊಟಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮನರಂಜನೆಯ ತಾಣವಾಗಿದ್ದ ದೊಡ್ಡಾಟ, ಸಣ್ಣಾಟ, ನಾಟಕ, ಗೀಗಿಪದ ಈಗ ನಗಣ್ಯವಾಗಿವೆ.ಆಧುನಿಕತೆಯ ಅಬ್ಬರದಲ್ಲಿ ನಾವು ಸಂಪ್ರದಾಯವನ್ನು ಮರೆಯುತ್ತಿದ್ದೇವೆ. ಹೀಗಾಗಬಾರದು ಗ್ರಾಮೀಣ ಮನರಂಜನಾ ಮೂಲಗಳಿಗೆ ಪುನಶ್ಚೇತನ ನೀಡುವದು ಎಲ್ಲರ ಕರ್ತವ್ಯವಾಗಿದೆ ಎಂದರು.
ನಂತರ ಅಂತರಾಷ್ಟ್ರೀಯ ಮಟ್ಟದ ಕಲಾವಿದೆ ಸವಿತಕ್ಕ ಅವರಿಂದ ಉಧೋ ಉಧೋ ಯಲ್ಲವ್ವ ಏಕವ್ಯಕ್ತಿ ರಂಗಪ್ರಯೋಗವನ್ನು ಅತ್ಯಂತ ಜೀವಕಳೆ ಬರುವ ರೀತಿಯಲ್ಲಿ ಅಭಿನಯಿಸಿ ನೆರದಿದ್ದ ಪ್ರೇಕ್ಷಕರನ್ನು ಮಂತ್ರ ಮುಗ್ದರಾಗುವಂತೆ ಮಾಡಿದರು.

ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಜಾನಪದ ವಿವಿಯ ಕುಲಸಚಿವ ಎನ್.ಎಂ ಸಾಲಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಶ್ರೀ ದುರ್ಗಾ ಡೆವಲ್ಪರ್ಸ್ ಮಾಲಿಕ ವೀರೇಶ ಉಂಡಿ, ಶ್ರೀ ದತ್ತಾ ಇನ್ ಫ್ರಾಸ್ಟ್ರಕ್ಚರ್ಸ್ ಮುಖ್ಯಸ್ಥ ಪ್ರಕಾಶ ಜೋಶಿ, ಪಂಜುರ್ಲಿ ಗ್ರುಪ್ ಆಫ್ ಹೊಟೆಲ್ ನ ರಾಜೇಂದ್ರ ಶೆಟ್ಟಿ, ಡಾ. ರಾಮಚಂದ್ರ ಕಾರಟಗಿ, ರಮೇಶ ಮಹಾದೇವಪ್ಪನವರ, ಸಂತೋಷ ವೆರ್ಣೇಕರ, ಕ್ಯಾಥರಿನ್ ದಿನೇಶ, ಸೋಮಸೇಖರ ಸೋಮನಕಟ್ಟಿ,ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಾಂತಣ್ಣ ಕಡಿವಾಲ, ಗೋಕುಲ್ ರಸ್ತೆಯ ಪೆÇಲೀಸ್ ಠಾಣೆಯ ಸಿಪಿಐ ಜೆ.ಎಂ ಕಾಲಿಮಿರ್ಚಿ, ಗುರೂಜಿ ಫೌಂಡೇಶನ್ ಅಧ್ಯಕ್ಷ ಗುರುರಾಜ ಹೂಗಾರ, ನೂಪೂರ ನೃತ್ಯ ವಿಹಾರ ಅಧ್ಯಕ್ಷ ಎಚ್.ಎಸ್ ಕಿರಣ ಸೇರಿದಂತೆ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿದ್ದರು.