ನವ ರಾಮನಗರ ನಿರ್ಮಾಣಕ್ಕೆ ಬದ್ಧ:ಇಕ್ಬಾಲ್ ಹುಸೇನ್

ರಾಮನಗರ,ಮೇ.೨೩- ರಾಮನಗರ ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ೨೦-೨೫ ವರ್ಷಗಳಷ್ಟು ಹಿಂದುಳಿದೆ. ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ನವ ರಾಮನಗರ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದು, ಕ್ಷೇತ್ರದ ಜನರು ಹಾಗೂ ಅಧಿಕಾರಿಗಳು ಕೈ ಜೋಡಿಸಬೇಕು ಎಂದು ನೂತನ ಶಾಸಕ ಇಕ್ಬಾಲ್ ಹುಸೇನ್ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನರು ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿ ಪಾರದರ್ಶಕ ಆಡಳಿತ ನೀಡುವುದು ನನ್ನ ಉದ್ದೇಶ. ನಾನು ಶಾಸಕನಲ್ಲ, ಜನರ ಸೇವಕ. ನನಗೆ ಹಣ ಅಧಿಕಾರದ ಆಸೆಯಿಲ್ಲ. ಯಾರಿಂದಲೂ ನಯಾ ಪೈಸೆ ಬಯಸುವವನಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಜನರ ಕೆಲಸ ಕಾರ್ಯಗಳನ್ನು ಮಾಡಿದರೆ ಸಾಕು. ಬಿಜೆಪಿ ಮತ್ತು ಜೆಡಿಎಸ್ ಅವಧಿಯಲ್ಲಿ ಕಂಡಂತಹ ಹಗರಣಗಳು, ಭ್ರಷ್ಟಾಚಾರ, ಲಂಚಗುಳಿತನಕ್ಕೆ ಅವಕಾಶ ನೀಡುವುದಿಲ್ಲ. ಸ್ವಚ್ಛ ಪ್ರಾಮಾಣಿಕ, ಪಾರದರ್ಶಕ ಆಡಳಿತ ನೀಡುತ್ತೇನೆ. ೭-೮ ವರ್ಷಗ ಳಿಂದ ನನ್ನನ್ನು ಮನೆ ಮಗನಂತೆ ಕಂಡು ಸೇವೆ ಮಾಡಲು ಅವಕಾಶ ನೀಡಿದ್ದೀನಿ. ನಿಮ್ಮೆಲ್ಲರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳು ಇವೆ. ಅವೆಲ್ಲವನ್ನು ಹಂತ ಹಂತವಾಗಿ ನಿವಾರಿಸಬೇಕಾಗಿದೆ. ಕ್ಷೇತ್ರದಲ್ಲಿನ ಸಮಸ್ಯೆಗಳ ನಿವಾರಣೆ ಮತ್ತು ಅಭಿವೃದ್ಧಿ ವಿಚಾರಗಳಲ್ಲಿ ಅಧಿಕಾರಿಗಳ ಸಭೆ ಕರೆದು ಮುಕ್ತವಾಗಿ ಚರ್ಚೆ ಮಾಡುತ್ತೇನೆ.ನೀರು ಮತ್ತೆ ಸೂರಿಗೆ ಆದ್ಯತೆ ನೀಡಿ ಮೂಲ ಸೌಕರ್ಯಗಳ ವೃದ್ದಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಯುವಕರಿಗೆ ಉದ್ಯೋಗ ದೊರಕಿಸಿಕೊಡಲು ಶ್ರಮಿಸುತ್ತೇನೆ.
ನಮ್ಮ ನಾಯಕರಿಗೆ (ಡಿ.ಕೆ ಶಿವಕುಮಾರ್) ಅಧಿಕಾರ ಸಿಕ್ಕಿದೆ. ಸರ್ಕಾರದಿಂದ ವಿಶೇಷ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ರಾಜು, ನಗರಸಭೆ ಅಧ್ಯಕ್ಷೆ ಬಿ.ಕೆ. ಪವಿತ್ರ, ಎಂಇಐಎಲ್ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ರಾಮನಗರ- ಚನ್ನಪಟ್ಟಣ ಪ್ರಾಧಿಕಾರ ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ನಗರಸಭೆ ಸದಸ್ಯರಾದ ಪಾರ್ವತಮ್ಮ, ಆಯಿಷಾ ಬಾನು, ಫೈರೋಜ್, ಆರೀಫ್, ಮುಖಂಡರಾದ ಬಸವನಪುರ ನರಸಿಂಹಮೂರ್ತಿ, ಎ.ಬಿ.ಚೇತನ್ ಕುಮಾರ್, ಪರ್ವಿಜ್ ಪಾಷಾ, ವಿ.ರಾಜು, ಶಿವಶಂಕರ್, ಜಗದೀಶ್ ಮೊದಲಾದವರು ಹಾಜರಿದ್ದರು.