ನವ ದಂಪತಿ ಶವ ಶಂಕಾಸ್ಪದ ಪತ್ತೆ

ಬೆಂಗಳೂರು,ಜು.೩೧- ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ನವ ದಂಪತಿಯ ಮೃತದೇಹಗಳು ದೇವನಹಳ್ಳಿ ತಾಲೂಕಿನ ಬಿಜ್ಜವಾರ ಬಳಿಯ ಕೃಷಿ ಹೊಂಡದಲ್ಲಿ ಪತ್ತೆಯಾಗಿವೆ.ಇದು ಆತ್ಮಹತ್ಯೆಯೇ ಅಥವಾ ಬೇರೆ ಏನಾದರೂ ಅನಾಹುತವೇ ಎನ್ನುವ ಬಗ್ಗೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ವಿಜಯಪುರದ ರಮೇಶ್ (೨೮), ಸಹನಾ (೨೬) ಮೃತ ನವ ವಿವಾಹಿತ ದಂಪತಿಯಾಗಿದ್ದಾರೆ.
ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ರಮೇಶ್ ಮತ್ತು ಸಹನಾ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅವರು ಮೂರು ತಿಂಗಳ ಹಿಂದಷ್ಟೇ ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದರು. ಮನೆಯಲ್ಲಿ ವಿರೋಧವಿದ್ದ ಹಿನ್ನೆಲೆಯಲ್ಲಿ ಅವರು ಯಾರ ಕಿರಿಕಿರಿಯೂ ಬೇಡ ಎಂದು ಪ್ರತ್ಯೇಕವಾಗಿ ಬಾಡಿಗೆ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.ಎರಡು ದಿನದ ಹಿಂದೆ ಸಹನಾ ಮತ್ತು ರಮೇಶ್ ಅವರು ಬಿಜ್ಜವಾರ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದರು. ಅಲ್ಲಿ ಮನೆಯವರ ಜತೆ ಚೆನ್ನಾಗಿಯೇ ಇದ್ದರು. ತಮ್ಮ ಮದುವೆ ವಿಚಾರದ, ನಂತರ ಎದುರಿಸಿದ ಸಮಸ್ಯೆಗಳ ಬಗ್ಗೆ ಸಹಜವಾಗಿ ಮಾತನಾಡಿದ್ದರು.ಇದೆಲ್ಲ ಆಗಿ ಅವರು ರಾತ್ರಿಯೇ ಮನೆಯಿಂದ ಹೊರಟಿದ್ದರು. ತಮ್ಮ ಮನೆಗೆ ಹೋಗುವುದಾಗಿ ಹೇಳಿದ್ದರು. ಆದರೆ, ಸೋಮವಾರ ಮುಂಜಾನೆ ಅವರ ಶವ ಕೃಷಿ ಹೊಂಡದಲ್ಲಿ ಪತ್ತೆಯಾಗಿದೆ.ಸ್ಥಳೀಯರು ಮತ್ತು ಪೊಲೀಸರಿಂದ ನೀರಿನಲ್ಲಿದ್ದ ಮೃತದೇಹ ಹೊರತೆಗೆಯಲಾಗಿದೆ.ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಇದರ ಕಾರಣಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.