ನವ್ಯ ಸಾಹಿತ್ಯದ ಪ್ರಮುಖ ಲೇಖಕ ಅನಂತಮೂರ್ತಿ

ಕಲಬುರಗಿ.ನ.19: ಕನ್ನಡಕ್ಕೆ ಆರನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಡಾ.ಯು.ಆರ್.ಅನಂತಮೂರ್ತಿ ಅವರು ನವ್ಯ ಸಾಹಿತ್ಯದ ಪ್ರಮುಖ ಲೇಖಕರಾಗಿದ್ದಾರೆ. ಅನೇಕ ಕತೆಗಳು, ಕಾದಂಬರಿಗಳು, ವಿಮರ್ಶಾ ಗ್ರಂಥಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಝಾಪೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ರಾಜ್ಯೋತ್ಸವ ಮಾಸಾಚರಣೆ ಪ್ರಯುಕ್ತ ಸರಣಿ ಕಾರ್ಯಕ್ರಮ-10ರಲ್ಲಿ ಗುರುವಾರ ಏರ್ಪಡಿಸಿದ್ದ ‘ನಾಡಿಗೆ ಡಾ.ಯು.ಆರ್.ಅನಂತಮೂರ್ತಿ ಕೊಡುಗೆ’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಅನಂತಮೂರ್ತಿಯವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.
ಆಕಾಶ ಮತ್ತು ಬೆಕ್ಕು, ಕ್ಲಿಪ್ ಜಾಯಿಂಟ್, ಎರಡು ದಶಕದ ಕತೆಗಳು ಎಂಬ ಕತೆಗಳು, ಸಂಸ್ಕಾರ, ಭಾರತೀಪುರ, ಅವಸ್ಥೆ, ಭವ ಕಾದಂಬರಿಗಳು, ಸಮಕ್ಷಮ, ಸನ್ನಿವೇಶ, ಪ್ರಜ್ಞೆ ಮತ್ತು ಪರಿಸರ, ಪೂರ್ವಾಪರ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ಉತ್ತಮ ಕತೆಗಾರರು, ಕಾದಂಬರಿಕಾರರು, ವಾಗ್ಮಿಗಳಾಗಿದ್ದರೆಂದರು.
ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ ಮಾತನಾಡಿ, ಅನಂತಮೂರ್ತಿಯವರು ಕನ್ನಡದ ನವ್ಯ ಪರಂಪರೆಗೆ ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ. ವಿವಿಧ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸುನೀಲಕುಮಾರ ವಂಟಿ, ಬಸಯ್ಯಸ್ವಾಮಿ ಹೊದಲೂರ, ಜೈಭೀಮ ಸರಡಗಿ, ವಿದ್ಯಾಸಾಗರ ಹಿರೇಮಠ, ಶರಣಬಸಪ್ಪ ಪೂಜಾರಿ, ಚನ್ನವೀರ ನಾಟೀಕಾರ, ನಿಂಗಮ್ಮ ಪೂಜಾರಿ, ಗಣೇಶ ಸೋಲಾಪೂರ, ರಮೇಶ ಕೋಡ್ಲಿ, ಶಮೀರ್ ಪಟೇಲ್ ಸೇರಿದಂತೆ ಮತ್ತಿತರರಿದ್ದರು.