ನವ್ಯ ಸಾಹಿತ್ಯಕ್ಕೆ ಶಾಂತಿನಾಥ ದೇಸಾಯಿ ಕೊಡುಗೆ ಅಪಾರ

ಕಲಬುರಗಿ:ಜು.23: ಕನ್ನಡ ಸಾಹಿತ್ಯ ಮತ್ತು ಭಾಷೆ ಜಗತ್ತಿನ ಶ್ರೀಮಂತ ಭಾಷೆಗಳಲ್ಲಿ ಒಂದಾಗಿದೆ. ಇದಕ್ಕೆ ಸಾವಿರಾರು ವರ್ಷಗಳ ಭವ್ಯ ಇತಿಹಾಸವಿದೆ. ಭಾರತದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತ್ಯ ನಮ್ಮದಾಗಿದೆ. ಅದಕ್ಕಾಗಿ ಅನೇಕ ಸಾಹಿತಿಗಳು ತಮ್ಮದೇ ಆದ ಅದ್ವಿತೀಯ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲಿ ಶಾಂತಿನಾಥ ದೇಸಾಯಿಯವರು ನವ್ಯ ಸಾಹಿತ್ಯದ ಮುಖ್ಯಕತೆಗಾರ, ಕಾದಂಬರಿಕಾರ ಹಾಗೂ ವಿಮರ್ಶಕರಾಗಿ ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು.

      ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ಸ್ವಾತಿ, ಶಿವಾ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ 'ಬಸವೇಶ್ವರ ಸಮಾ ಸೇವಾ ಬಳಗ'ದ ವತಿಯಿಂದ ಈಚೆಗೆ ಜರುಗಿದ 'ಸಾಹಿತಿ ಶಾಂತಿನಾಥ ದೇಸಾಯಿಯವರ ಜನ್ಮದಿನಾಚರಣೆ'ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
    ಶಾಂತಿನಾಥ ದೇಸಾಯಿ ಅವರು ಅನೇಕ ಸಣ್ಣ ಕತೆಗಳನ್ನು ರಚಿಸಿ 'ಸಣ್ಣ ಕತೆಗಳ ಸರ್ದಾರ' ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 'ಮಂಜುಗಡ್ಡೆ', 'ಕ್ಷಿತಿಜ', 'ದಂಡೆ', 'ರಾಕ್ಷಸ', 'ಪರಿವರ್ತನೆ' ಇವು ಕಥಾಸಂಕಲಗಳಾಗಿದ್ದು,  'ಮುಕ್ತಿ', 'ವಿಕ್ಷೇಪ', 'ಸೃಷ್ಟಿ', 'ಬೀಜ', 'ಸಂಬಂಧ', 'ಅಂತರಾಳ' ಇವು ಇವರ ಕಾದಂಬರಿಗಳಾಗಿವೆ. ಇವರು ಕಾವ್ಯಗಳ ಕಡೆಗೆ ಹೊರಳದೆ ಹೋದರೂ, ಕತೆ, ಕಾದಂಬರಿಗಳಲ್ಲಿ ಕಾವ್ಯಾತ್ಮಕಗೇಯತೆಯನ್ನು ದುಡಿಸಿಕೊಂಡಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿ, ದೇಸಾಯಿಯವರು ವಿಮರ್ಶೆಯ ಕ್ಷೇತ್ರದಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ. ಸುಮಾರು ಎರಡುವರೆ ದಶಕದ ನವ್ಯ ಸಾಹಿತ್ಯದ ವಿವಿಧ ಪ್ರಕಾರದ ಮೇಲೆ ರೂಪಿಸಿದ ವಿಮರ್ಶಾ ಸಂಕಲನ 'ನವ್ಯ ಸಾಹಿತ್ಯದ ದರ್ಶನ' ಅತ್ಯಂತ ಪ್ರಸಿದ್ಧಿ ಪಡೆಯಿತು. ಹೀಗೆ ವಿಮರ್ಶೆ, ಕಥೆ, ಕಾದಂಬರಿ ಕ್ಷೇತ್ರದಲ್ಲಿ ಬಹುದೊಡ್ಡ ಖ್ಯಾತಿಯನ್ನು ದೇಸಾಯಿಯವರು ಪಡೆದಿದ್ದಾರೆಂದು ನುಡಿದರು.
   ಪ್ರಮುಖರಾದ ಸಂಗೀತಾ ಸಿ.ಗಾರಂಪಳ್ಳಿ, ಬಸಯ್ಯಸ್ವಾಮಿ ಹೊದಲೂರ, ಸಿದ್ದರಾಮ ತಳವಾರ ಸೇರಿದಂತೆ ಹಲವರಿದ್ದರು.