ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.23: ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ದೊರೆಯುವುದಿಲ್ಲ, ಶಿಕ್ಷಣಕ್ಕೆ ಬೇಕಾದ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ ಎನ್ನುವ ನಂಬಿಕೆ ಜನರಲ್ಲಿದೆ, ಆದರೆ ಗ್ರಾಮೀಣ ಭಾಗದ ಒಂದೇ ಕುಟುಂಬದ ಮೂರು ಜನ ವಿದ್ಯಾರ್ಥಿಗಳು ಸರ್ಕಾರಿ ಮತ್ತು ಖಾಸಗಿ ಶಾಲೆಯಲ್ಲಿ ಓದಿ ನವೋದಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬಹುದು ಎನ್ನುವುದನ್ನು ತಾಲೂಕಿನ ಬಲಕುಂದಿ ಗ್ರಾಮದ ರೈತ ಉಳ್ಳಿ ಶರಣಪ್ಪನ ಮಕ್ಕಳು ಸಾಧಿಸಿ ತೋರಿಸಿದ್ದಾರೆ.
ಪ್ರಸಕ್ತ ವರ್ಷದ ನವೋದಯ ಅರ್ಹತಾ ಪರೀಕ್ಷೆಯಲ್ಲಿ ರೈತ ಉಳ್ಳಿ ಶರಣಪ್ಪನ ಮಗನಾದ ಯು.ಎಸ್ ಬಸವರಾಜ 6ನೇ ತರಗತಿಗೆ ನಡೆದ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಯು.ಎಸ್.ರಶ್ಮಿ 9ನೇ ತರಗತಿ, ಯು.ಎಸ್.ಕಾವ್ಯ 8ನೇ ತರಗತಿ, ಒಂದೇ ಕುಟುಂಬದ ಮೂರು ಜನ ವಿದ್ಯಾರ್ಥಿಗಳು ನವೋದಯ ಶಾಲೆಯ ಪ್ರವೇಶಕ್ಕೆ ಅರ್ಹತೆಯನ್ನು ಪಡೆದಿರುವುದು ವಿಶೇಷ ಸಾಧನೆಯಾಗಿದೆ.
ತಾಲ್ಲೂಕಿನ ಬಲುಕುಂದಿ ಗ್ರಾಮದ ರೈತ ಉಳ್ಳಿ ಶರಣಪ್ಪ 10ನೇ ತರಗತಿವರೆಗೆ ಓದಿದ್ದು, ಪತ್ನಿ ನೀಲಮ್ಮ 8ನೇ ತರಗತಿಯವರೆಗೆ ಓದಿಕೊಂಡಿದ್ದು, ವಿದ್ಯಾರ್ಥಿಗಳಾದ ಯು.ಎಸ್.ರಶ್ಮಿ, ಯು.ಎಸ್.ಕಾವ್ಯ, ಯು.ಎಸ್ ಬಸವರಾಜ ಗ್ರಾಮೀಣ ಭಾಗದ ಉಪ್ಪಾರಹೊಸಳ್ಳಿ, ಮಾಟಸೂಗೂರು, ಬಲಕುಂದಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದು, ಸಿಂಧನೂರಿನ ಛಾಲೆಂಜಿಂಗ್ ಕೋಚಿಂಗ್ ಸೆಂಟರ್‌ನಲ್ಲಿ 2 ತಿಂಗಳು ತರಬೇತಿ ಪಡೆದು ಯು.ಎಸ್.ರಶ್ಮಿ 9ನೇ ತರಗತಿ, ಯು.ಎಸ್.ಕಾವ್ಯ 8ನೇ ತರಗತಿ, ಯು.ಎಸ್.ಬಸವರಾಜ 6ನೇ ತರಗತಿಯ ಪ್ರವೇಶಕ್ಕೆ ನವೋದಯ ಪರೀಕ್ಷೆಯನ್ನು ಬರೆದಿದ್ದು, ಮೂವರು ವಿದ್ಯಾರ್ಥಿಗಳು ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕಿನಲ್ಲಿರುವ ಚಿಕ್ಕಜೋಗಿಹಳ್ಳಿಯ ನವೋದಯ ಶಾಲೆಗೆ ಅಯ್ಕೆಯಾಗಿದ್ದಾರೆ.
ನಾವು ಕಲಿಯದಿದ್ದರು ನಮ್ಮ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎನ್ನುವ ಉದೇಶ ನಮ್ಮದು ಇದಕ್ಕೆ ತಕ್ಕಂತೆ ನಮ್ಮ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಮತ್ತು ಖಾಸಗಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಪಡೆದು ನವೋದಯ ಅರ್ಹತೆ ಪರೀಕ್ಷೆ ಬರೆಯಲು 2 ತಿಂಗಳು ಖಾಸಗಿ ಕೋಚಿಂಗ್ ಸೆಂಟರ್‌ನಲ್ಲಿ ಶಿಕ್ಷಣ ಕೊಡಿಸಲಾಗಿದ್ದು, ನಮ್ಮ ಮೂರು ಜನ ಮಕ್ಕಳು ನವೋದಯ ಶಾಲೆಗೆ ಪ್ರವೇಶ ಪಡೆದಿರುವುದು ಸಂತಸದ ಸಂಗತಿಯಾಗಿದೆ ಎಂದು ರೈತ ಉಳ್ಳಿ ಶರಣಪ್ಪ ತಿಳಿಸಿದ್ದಾರೆ.
ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ಪಾಠ ಪ್ರವಚನಗಳನ್ನು ಉತ್ತಮವಾಗಿ ಮನನ ಮಾಡಿಕೊಂಡು ಓದಿಕೊಂಡಿದ್ದು, ನಾವು ನವೋದಯ ಅರ್ಹತಾ ಪರೀಕ್ಷೆ ಬರೆದು ನವೋದಯ ಶಾಲೆಗೆ ಆಯ್ಕೆಯಾಗಲು ಸಹಕಾರಿಯಾಗಿದೆ ಎಂದು ವಿದ್ಯಾರ್ಥಿನಿ ಯು.ಎಸ್.ರಶ್ಮಿ ತಿಳಿಸಿದ್ದಾಳೆ.