ನವೋದಯ ವೈದ್ಯಕೀಯ ಆಸ್ಪತ್ರೆ : ಆಕ್ಸಿಜನ್ ಕೊರತೆ ಸುಳ್ಳು ಪ್ರಕರಣ

ರಾಯಚೂರು.ಮೇ.೨೧- ನವೋದಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಮೇ.೦೬ ರಂದು ಆಕ್ಸಿಜನ್ ಕೊರತೆ ಇರಲಿಲ್ಲ. ಆದರೆ, ಅನಗತ್ಯವಾಗಿ ಈ ಬಗ್ಗೆ ಅಪ ಪ್ರಚಾರ ಮತ್ತು ಆತಂಕ ನಿರ್ಮಿಸುವುದು ಸರಿಯಾದ ಕ್ರಮವಲ್ಲವೆಂದು ನಗರಾಭಿವೃದ್ಧಿ ಪ್ರಾಧಿಕಾರಿದ ಮಾಜಿ ಅಧ್ಯಕ್ಷ ಕಡಗೋಳ ಆಂಜಿನೇಯ್ಯ ಅವರು ಹೇಳಿದ್ದಾರೆ.
ನನ್ನ ವಾರ್ಡಿನ ಮತ್ತು ನಮಗೆ ಹತ್ತಿರದ ಸಂಬಂಧಿಯಾದ ಒಬ್ಬರು ಆಸ್ಪತ್ರೆಯಲ್ಲಿ ಅಂದು ದಾಖಲಾಗಿದ್ದರು. ಆಕ್ಸಿಜನ್ ಕೊರತೆ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ನಾನು ತಕ್ಷಣವೇ ಅಲ್ಲಿಯ ಮುಖ್ಯಸ್ಥರಿಗೆ ಸಂಪರ್ಕಿಸಿದೆ. ಯಾವುದೇ ಸೋಂಕಿತರನ್ನು ಇಲ್ಲಿಂದ ಸ್ಥಳಾಂತರಿಸುತ್ತಿಲ್ಲ ಮತ್ತು ಆಸ್ಪತ್ರೆಯಲ್ಲಿ ಯಾವುದೇ ಆಕ್ಸಿಜನ್ ಕೊರತೆಯಿಲ್ಲವೆಂದು ಸ್ಪಷ್ಟಪಡಿಸಿದರು.
ಆದರೆ, ಮತ್ತೊಂದು ಕಡೆ ಆಕ್ಸಿಜನ್ ಕೊರತೆಯ ಅಪಪ್ರಚಾರ ನಡೆಸಲಾಗಿತ್ತು. ಈ ರೀತಿಯ ಅಪಪ್ರಚಾರ ಸರಿಯಾದ ಕ್ರಮವಲ್ಲವೆಂದು ಹೇಳಿದ ಅವರು, ಕೊರೊನಾದಂತಹ ಈ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯ ಅಪಪ್ರಚಾರ ಮಾಡುವ ಮೂಲಕ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಇಂತಹ ಘಟನೆಗಳಿಂದ ಜನ ಭಯಭೀತರಾಗುತ್ತಾರೆ. ಶಾಸಕ ಡಾ.ಶಿವರಾಜ ಪಾಟೀಲ್ ಅವರು ಆಕ್ಸಿಜನ್ ಮತ್ತಿತರ ಕೊರತೆಯಾಗದಂತೆ ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದಾರೆ. ರಾಜಕೀಯ ಉದ್ದೇಶಕ್ಕಾಗಿ ಆಕ್ಸಿಜನ್ ಮತ್ತಿತರ ಗೊಂದಲ ಸೃಷ್ಟಿಸುವುದು ಬೇಡವೆಂದು ಸಲಹೆ ನೀಡಿದ್ದಾರೆ.