ನವೀಕೃತ ಶಾಲಾ ಕೊಠಡಿ ಸೇವೆಗೆ ಸಮರ್ಪಣೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜ.19:- ಶಾಲಾ ಕೊಠಡಿಗಳನ್ನು ಮತ್ತು ದೇವಾಲಯಗಳನ್ನು ನಿರ್ಮಾಣ ಮಾಡುವುದು ನಾವು ಮುಂದಿನ ತಲೆಮಾರಿಗೆ ನೀಡುವ ಕೊಡುಗೆಯಾಗಿದೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ತಾಲ್ಲೂಕಿನ ಕಸಬಾ ಹೋಬಳಿಯ ಹೆಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನವೀಕೃತ ಕಟ್ಟಡವನ್ನು ಶಾಲಾ ಮಕ್ಕಳಿಂದ ಟೇಪ್ ಕತ್ತರಿಸುವ ಮೂಲಕ ಸೇವೆಗೆ ಸಮರ್ಪಿಸಿ ಮಾತನಾಡಿದರು.
ನಮ್ಮ ಪೂರ್ವಜರ ಕಾಲದಲ್ಲಿ ಶಾಲೆಗಳು ಇರಲಿಲ್ಲ. ತದನಂತರ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡುವ ಮೂಲಕ ಶಿಕ್ಷಣವನ್ನು ನೀಡಲಾಗುತ್ತಿತ್ತು. ಲಾಡ್ರ್ಮೆಕಾಲೆ, ಮಹಾತ್ಮಾಗಾಂದೀಜಿ ಮುಂತಾದವರು ಶಿಕ್ಷಣದ ಮಹತ್ವವನ್ನು ನಾಡಿಗೆ ಸಾರಿದ ಪರಿಣಾಮ ಗುರುಕುಲಗಳಲ್ಲಿ ಶಿಕ್ಷಣ ಪಡೆಯಲು ಆಸಕ್ತರು ಹೋಗುತ್ತಿದ್ದರು. ನಂತರ ಸರ್ಕಾರವೇ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಸಾರ್ವತ್ರೀಕರಿಸಿ ಶಿಕ್ಷಣ ನೀಡುತ್ತಿದೆ. ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅನೇಕ ಸವಲತ್ತುಗಳನ್ನು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ. ಪ್ರತಿವರ್ಷ ನೂರಾರು ಸಂಖ್ಯೆಯ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದರಂತೆ ಹೆಮ್ಮನಹಳ್ಳಿ ಗ್ರಾಮದಲ್ಲಿಯೂ ಹೊಸ ಕಟ್ಟಡ ತಲೆ ಎತ್ತಿನಿಂತಿದ್ದು ಭವ್ಯ ಭಾರತದ ಭವಿಷ್ಯ ಶಾಲಾ ತರಗತಿಗಳಲ್ಲಿ ರೂಪುಗೊಳ್ಳುತ್ತದೆ ಎಂಬ ಮಹನೀಯರ ಆಶಯದಂತೆ ಇಲ್ಲಿನ ಮಕ್ಕಳು ಉತ್ತಮ ವಿದ್ಯಾವಂತರಾಗಿ ತಮ್ಮ ತಂದೆತಾಯಿಗಳಿಗೆ, ಊರಿಗೆ, ನಾಡಿಗೆ ಕೀರ್ತಿ ತರುವ ಕೆಲಸವನ್ನು ಮಾಡಬೇಕು. ಯಾವ ವಿಷಯಗಳಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಪರಿಣಿತರಾಗುವ ಮೂಲಕ ನಿಮ್ಮದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಾಜಿ ಗ್ರಾಪಂ ಸದಸ್ಯ ಕೃಷ್ಣೇಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜೇಗೌಡ, ಉಪಾದ್ಯಕ್ಷೆ ಶಿಲ್ಪ, ಗ್ರಾಪಂ ಮಾಜಿ ಸದಸ್ಯ ಸತೀಶ್, ವಿಎಸ್‍ಎಸ್‍ಎನ್ ಮಾಜಿ ನಿರ್ದೇಶಕ ಗಂಗೇಗೌಡ, ಶೇಖರ್, ಮನ್ಮುಲ್ ನೌಕರ ರವಿ, ಮುಖ್ಯ ಶಿಕ್ಷಕ ಡಿ.ಅಶೋಕ್, ಸಹಶಿಕ್ಷಕ ಮಹೇಶ್, ರಾಧ, ಭಾಗ್ಯ ಸೇರಿದಂತೆ ಹಲವರು ಹಾಜರಿದ್ದರು.