ನವೀಕರಣ ಕಾಮಗಾರಿ ವಿರುದ್ಧ ರೈತರ ಆಕ್ರೋಶ

ದೇವದುರ್ಗ,ಜು.೦೯-
ನಾರಾಯಣಪುರ ಬಲದಂಡೆ ಉಪನಾಲೆ ನವೀಕರಣ ಕಾಮಗಾರಿ ಕಳಪೆ ಬಗ್ಗೆ ರೈತರು ಆಕ್ರೋಶ ವ್ಯಕ್ತಡಿಸಿದ್ದು ಇಲ್ಲಿನ ಕೊಪ್ಪರ ರಸ್ತೆಯ ೧೫ನೇ ಡಿಸ್ಟ್ರಿಬ್ಯೂಟ್‌ನಲ್ಲಿ ಕೈಗೊಂಡ ಕಾಮಗಾರಿಯನ್ನು ಗೌರಂಪೇಟೆ ರೈತರು ಶನಿವಾರ ಬಂದ್ ಮಾಡಿಸಿ ಪ್ರತಿಭಟಿಸಿದರು.
ಸುಮಾರು ೧೪೪೬ಕೋಟಿ ರೂ. ವೆಚ್ಚದ ಬೃಹತ್ ಕಾಮಗಾರಿ ಬಗ್ಗೆ ಆರಂಭದಿಂದಲೂ ಅಪಸ್ವರಗಳು ಕೇಳಿಬಂದಿದ್ದವು. ಸುಮಾರು ೧೮ಉಪಕಾಲುವೆ ಸೀಳುಗಾಲುವೆ, ಡ್ರಾಪ್ ನಿರ್ಮಾಣ ಕಾಮಗಾರಿಯನ್ನು ಉಪಗುತ್ತಿಗೆ ನೀಡಲಾಗಿದೆ. ಹಲವು ಕಡೆ ಕಳಪೆ ಕಾಮಗಾರಿ ಬಗ್ಗೆ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿ ಬಂದ್ ಮಾಡಿಸಿದ್ದರು. ಇಲ್ಲಿನ ಗೌರಂಪೇಟೆ ಸಮೀಪದ ಕೊಪ್ಪರ ರಸ್ತೆಯಲ್ಲಿ ಕೈಗೊಂಡ ಕಾಮಗಾರಿ ಕಳಪೆಯಾಗಿದ್ದು ಹತ್ತಾರು ರೈತರು ಸ್ಥಳಕ್ಕೆ ಭೇಟಿನೀಡಿ ಕೆಲಸ ಬಂದ್ ಮಾಡಿಸಿದ್ದಾರೆ.
ಕಾಮಗಾರಿಯಲ್ಲಿ ಎಲ್ಲಿಯೂ ನೆಲಸಮತಟ್ಟು ಮಾಡಿಲ್ಲ. ಈ ಹಿಂದೆ ಕಾಲುವೆ ತೋಡಿ ಬಿಡಲಾಗಿದ್ದು, ಮಳೆಗೆ ಅಲ್ಲಲ್ಲಿ ಕುಸಿದಿದೆ. ಕೆಂಪುಮಣ್ಣು ಹಾಕಿ ಡಂಪ್ ಮಾಡಿಲ್ಲ. ನಿಯಮ ಪ್ರಕಾರ ಕಬ್ಬಿಣದ ಸರಳು ಬಳಸುತ್ತಿಲ್ಲ. ಕನಿಷ್ಠ ೬ಇಂಚು ಸಿಮೆಂಟ್ ಹಾಕಬೇಕಿದ್ದು ಕೇವಲ ಎರಡ್ಮೂರು ಇಂಚು ಕಾಂಕ್ರೇಟ್ ಹಾಕಿ ಮಾಡಲಾಗುತ್ತಿದೆ. ಕಡ್ಡಾಯವಾಗಿ ಯಂತ್ರದ ಸಹಾಯದಿಂದ ಕಾಮಗಾರಿ ಮಾಡಬೇಕಿದೆ. ವೈಬ್ರೇಷನ್ ಮಿಷನ್, ಲೇವಲ್ ಮಿಷನ್ ಬಳಸಬೇಕು. ಆದರೆ, ಲೇಬರ್ ಕೈಯಿಂದ ಗೋಡೆಗೆ ಸಿಮೆಂಟ್ ಮಾಡಿದಂತೆ ತಿಳುವಾಗಿ ಮಾಡಲಾಗುತ್ತಿದೆ.
ಕಾಮಗಾರಿ ನಡೆಯುವ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ಭೇಟಿ ನೀಡಿ ಪರಿಶೀಲಿಸಿಲ್ಲ. ತುಂಡುಗುತ್ತಿಗೆ ಪಡೆದವರು ಬೇಕಾಬಿಟ್ಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಮಾಡಿದ ಕೆಲಸ ಎಲ್ಲೆಂದರಲ್ಲಿ ಕಿತ್ತುಹೋಗಿದ್ದು ರೈತರ ಜಮೀನಿಗೆ ನೀರು ತಲುಪುತ್ತಿಲ್ಲ. ಕೂಡಲೇ ಸ್ಥಳಕ್ಕೆ ಗುತ್ತಿಗೆದಾರರು, ಇಂಜಿನಿಯರ್ ಭೇಟಿನೀಡಬೇಕು. ನಿಯಮಪ್ರಕಾರ ಸಿಮೆಂಟ್, ಕಬ್ಬಿಣ ಬಳಸಬೇಕು ಎಂದು ರೈತರು ಒತ್ತಾಯಿಸಿ ಕಾಮಗಾರಿ ಬಂದ್ ಮಾಡಿಸಿದ್ದಾರೆ.
ರೈತರಾದ ಗಂಗನಗೌಡ, ಉಮಾಪತಿಗೌಡ, ಬಸವರಾಜ ಹಾಗೂ ಸಾಸ್ವಿಗೇರಾ, ಗೌರಂಪೇಟೆ, ನಗರಗಂಡ ಗ್ರಾಮದ ರೈತರು ಇದ್ದರು.