ನವಾಲ್ನಿ ಮೃತದೇಹ ಹಸ್ತಾಂತರ ವಿಳಂಬ

ಮಾಸ್ಕೊ, ಫೆ.೨೦- ಆರ್ಟಿಕ್‌ನ ಜೈಲಿನಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಟೀಕಾಕಾರ ಅಲೆಕ್ಸ್ಕಿ ನವಾಲ್ನಿಯ ಮೃತದೇಹವನ್ನು ಎರಡು ವಾರಗಳ ವರೆಗೆ ಹಸ್ತಾಂತರ ಮಾಡಲಾಗುವುದಿಲ್ಲ ಎಂದು ಕುಟುಂಬಕ್ಕೆ ತಿಳಿಸಲಾಗಿರುವ ಸಂಗತಿ ಇದೀಗ ಬಹಿರಂಗವಾಗಿದೆ. ಮೃತದೇಹದ ರಾಸಾಯನಿಕ ವಿಶ್ಲೇಷಣೆ ನಡೆಸಲಾಗುತ್ತಿರುವ ಹಿನ್ನೆಲೆಯಲ್ಲಿ ವಿಳಂಬವಾಗಿದೆ ಎಂದು ತಾಯಿಗೆ ರಷ್ಯಾ ತಿಳಿಸಿದೆ ಎಂದು ನವಾಲ್ನಿ ಪ್ರತಿನಿಧಿ ಹೇಳಿದರು.
ನವಾಲ್ನಿಯ ದೇಹವನ್ನು ರಾಸಾಯನಿಕ ವಿಶ್ಲೇಷಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಎರಡು ವಾರಗಳ ವರೆಗೆ ದೇಹವನ್ನು ಹಸ್ತಾಂತರ ಮಾಡಲು ಸಾಧ್ಯವಿಲ್ಲ ಎಂದು ತಾಯಿಗೆ ರಷ್ಯಾ ತನಿಖಾಧಿಕಾರಿಗಳು ತಿಳಿಸಿದ್ದಾರೆ ಎಂದು ನವಾಲ್ನಿಯ ವಕ್ತಾರ ಕಿರಾ ಯರ್ಮಿಶ್ ತಿಳಿಸಿದ್ದಾರೆ. ಈ ನಡುವೆ ವ್ಲಾಡಿಮಿರ್ ಪುಟಿನ್ ಅವರು ನನ್ನ ಪತಿಯನ್ನು ಕೊಂದಿದ್ದಾರೆ ಎಂದು ನವಾಲ್ನಿ ಪತ್ನಿ ಯೂಲಿಯಾ ನವಲ್ನಾಯಾ ಅವರು ನೇರ ಆರೋಪ ಹೊರಿಸಿದ್ದಾರೆ. ಅಲ್ಲದೆ ವಿಷದ ಕುರುಹುಗಳು ಕಣ್ಮರೆಯಾಗುವವರೆಗೂ ನವಾಲ್ನಿ ದೇಹವನ್ನು ಇರಿಸಲಾಗಿದೆ ಎಂದು ಆರೋಪಿಸಿದ್ದಾರೆ. ನವಾಲ್ನಿಯನ್ನು ಹತ್ಯೆ ನಡೆಸುವ ಮೂಲಕ ಪುಟಿನ್ ನನ್ನ ಅರ್ಧ ಹೃದಯ ಹಾಗೂ ಅರ್ಧ ಆತ್ಮವನ್ನು ಕೊಂದಿದ್ದಾನೆ. ಮುಕ್ತ ರಷ್ಯಾಕ್ಕಾಗಿ ನವಾಲ್ನಿಯ ಹೋರಾಟವನ್ನು ನಾನು ಮುಂದುವರೆಸುತ್ತೇನೆ. ಮುಕ್ತ ರಷ್ಯಾದಲ್ಲಿ ವಾಸಿಸಲು ನಾನು ಇಚ್ಛಿಸಿದ್ದೇನೆ. ಈ ವಿಚಾರದಲ್ಲಿ ನೀವೆಲ್ಲರೂ ನನ್ನ ಜೊತೆ ಕೈಜೋಡಿಸಿ. ಹೊಸ ರಷ್ಯಾವನ್ನು ರಚಿಸಲು ಜನತೆ ಜೊತೆ ಹೋರಾಡಲಿದ್ದೇನೆ ಎಂದು ನವಲ್ನಾಯಾ ಅವರು ವಿಡಿಯೋ ಸಂದೇಶದಲ್ಲಿ ಭಾವನಾತ್ಮಕವಾಗಿ ತಿಳಿಸಿದ್ದಾರೆ. ಇನ್ನು ಮೂರು ದಶಕಗಳ ಜೈಲುಶಿಕ್ಷೆಗೆ ಗುರಿಯಾಗಿದ್ದ ನವಾಲ್ನಿಯ ನಿಧನದ ಸುದ್ದಿಯನ್ನು ಶುಕ್ರವಾರ ಬಹಿರಂಗಪಡಿಸಲಾಗಿತ್ತು. ನಡೆದಾಡುವಾಗ ವೇಳೆ ಕುಸಿದು ಬಿದ್ದ ನಂತರ ನವಾಲ್ನಿಗೆ ಪ್ರಜ್ಞೆ ಬಂದಿರಲಿಲ್ಲ ಎಂದು ಆತನನ್ನು ಬಂಧಿಸಲಾಗಿದ್ದ ಸೈಬೀರಿಯನ್ ಪೆನಾಲ್ ಕಾಲೋನಿ ಅಧಿಕಾರಿಗಳು ತಿಳಿಸಿದ್ದಾರೆ.