ನವಶಿಲಾಯುಗದ ಅವಶೇಷಗಳು:ಕೊರೆದ ಚಿತ್ರಗಳು ಪತ್ತೆ


ಸಂಜೆವಾಣಿ ವಾರ್ತೆ           
ತೆಕ್ಕಲಕೋಟೆ, ಜ.04: ಪಟ್ಟಣದ ಸುತ್ತಲಿರುವ ಶಾಂತಾವರ್ತಿ ಬೆಟ್ಟ, ಆದೋನಿ ಸ್ವಾಮಿ ದಾದಾ ಮಜಾರ್ ಬೆಟ್ಟ ಗಳಲ್ಲಿ ನೂತನ ಶಿಲಾಯುಗದ ಅವಶೇಷಗಳು ಮತ್ತು ಗವಿಯಲ್ಲಿ ಕೊರೆದ ಚಿತ್ರಗಳನ್ನು ಹವ್ಯಾಸಿ ಸಂಶೋಧಕ ಕಾಡಸಿದ್ದ ಇವರು ಪತ್ತೆ ಹಚ್ಚಿದ್ದಾರೆ.
ಪಟ್ಟಣದ ಗುಡ್ಡದ ಗುಹೆಯ ಹಾಸು ಬಂಡೆಯ ಮೇಲೆ ಮತ್ತು ಕೆಳ ಭಾಗದಲ್ಲಿ ಆದಿ ಮಾನವರು ಚಿತ್ರಗಳನ್ನು ಕೊರೆದಿದ್ದಾರೆ. ಅವು ದನದ ಚಿತ್ರಗಳಾಗಿದ್ದು ಅದರಲ್ಲಿ ಗೂಳಿ ಅಧಿಕವಾಗಿವೆ.
ಶಿಲಾಯುಗದ ಮಾನವ ತನ್ನ ಮನರಂಜನೆಗಾಗಿ ಅಥವಾ ತನ್ನ ಭಾವನೆಗಳ ಅಭಿವ್ಯಕ್ತಿಯಾಗಿ ಇಂಥ ಚಿತ್ರಗಳನ್ನು ಬಿಡಿಸುತ್ತಿದ್ದರು ಎಂದು ಹೇಳಬಹುದಾಗಿದೆ ತಮ್ಮ ಸುತ್ತಮುತ್ತ ಕಂಡು ಬರುವ ಪ್ರಾಣಿಗಳು ಮತ್ತು ಪಕ್ಷಿಗಳು ಚಿತ್ರಗಳು ಹಾಗೂ ತನ್ನರೂಪದ ಚಿತ್ರಗಳು ಗವಿಯ ಒಳಬದಿಯಲ್ಲಿ ಕುಟ್ಟಿ ಬಿಡಿಸಿರುವುದು ಎಲ್ಲಾ ಕಡೆ ಕಂಡು ಬಂದಿವೆ, ಈ ಬೆಟ್ಟದ ಗುಹೆ ಪಕ್ಕದಲ್ಲಿ ಕೆರೆ ಇರುವುದರಿಂದ ಶಿಲಾಯುಗದ ಜನ ಒಂದು ಕಡೆ ನೆಲೆಯೂರಿ ವ್ಯವಸಾಯ ಹಾಗೂ ಪ್ರಾಣಿ ಸಾಕಾಣಿಕೆ ಮಾಡುತ್ತಿದ್ದರು ಎಂದು ಹೇಳಬಹುದಾಗಿದೆ.
ಈ ಗುಹೆಯ ಹಾಸು ಬಂಡೆಯಲ್ಲಿ ಮನುಷ್ಯ ಮತ್ತು ಎಂಟು ಗೂಳಿ ಚಿತ್ರಗಳನ್ನು ಕೊರೆದು ಬಿಡಿಸಲಾಗಿದ್ದು ಕೆಳಭಾಗದ ಹಾಸು  ಬಂಡೆಯಲ್ಲಿ ಮೂರು ಗೂಳಿ ಹಾಗೂ ಐದು ಜನ ಆದಿಮಾನವರು ನಿಂತಿರುವ ಕುಟ್ಟು ಚಿತ್ರಗಳು ಕಂಡು ಬಂದಿರುತ್ತವೆ. ಶಾಂತಾವರ್ತಿ ಬೆಟ್ಟದಲ್ಲಿ ಇದೇ ಕಾಲಕ್ಕೆ ಸೇರುವ ತುಂಡಾದ ರಿಂಗ್ ಸ್ಟೋನ್ ದೊರೆತಿದೆ. ಈಗಾಗಲೇ  ತೆಕ್ಕಲುಕೋಟೆಯಲ್ಲಿ ಗವಿವರ್ಣಚಿತ್ರಗಳು ಬೆಳಕಿಗೆ ಬಂದಿದ್ದವು. ಪ್ರಸ್ತುತ ಬಂಡೆಯಲ್ಲಿ ಕೊರೆದ ಚಿತ್ರಗಳು ಕಂಡುಬಂದಿರುವುದರಿಂದ ಇಲ್ಲಿದ್ದ ಆದಿ ಮಾನವನ ಪಶುಪಾಲನೆಯ ಬಗ್ಗೆ ಹಾಗೂ ಅವನ ಕಲಾಭಿಜ್ಞತೆಯ ಬಗ್ಗೆ ತಿಳಿಯಬಹುದಾಗಿದೆ.
ರಿಂಗ್ ಸ್ಟೋನ್ ನವಶಿಲಾಯುಗದ ಕೃಷಿ ಪರಿಕರವಾಗಿ ಬಳಕೆಯಾಗಿದ್ದವು ಈ ಎಲ್ಲಾ ಚಿತ್ರ ಹಾಗೂ ಅವಶೇಷಗಳನ್ನು ಪರಿಶೀಲಿಸಿದ ಗಂಗಾವತಿಯ ಇತಿಹಾಸ ತಜ್ಞ ಡಾ.ಶರಣಬಸಪ್ಪ ಕೋಲ್ಕಾರ ಇವು ಇಂದಿಗೆ ನಾಲ್ಕುಸಾವಿರ ವರ್ಷಗಳ ಹಿಂದಿನ ನವಶಿಲಾಯುಗಕ್ಕೆ ಸೇರಿದವೆಂದು ಅಭಿಪ್ರಾಯ ತಿಳಿಸಿದರು.
ಕ್ಷೇತ್ರ ಶೋಧನಾ ಕಾರ್ಯದಲ್ಲಿ ವಿದ್ಯಾರ್ಥಿಗಳಾದ ಎಮ್.ಹೊನ್ನೂರ, ವೈ.ಮೈಬು, ಎಮ್.ಪೀರವಲಿ ಪಾಲ್ಗೊಂಡಿದ್ದರು.