ನವಲಗುಂದ: ಕೊರೋನಾ ಇಳಿಮುಖ : ಶಾಸಕ ಮುನೇನಕೊಪ್ಪ.


ನವಲಗುಂದ ,ಜೂ.5: ಕ್ಷೇತ್ರದ 72 ಗ್ರಾಮಗಳಲ್ಲಿ ಕೊರೋನಾ ಸಾಂಕ್ರಾಮಿಕ ಸೋಂಕನ್ನು ನಿರಂತರ ಪ್ರಯತ್ನದಿಂದ ಹತೋಟಿಗೆ ತರಲಾಗಿದ್ದು , ತಾಲೂಕಾಡಳಿತ ಮತ್ತು ಜನರ ಸಹಕಾರವೇ ಕಾರಣ ಎಂದು ಶಾಸಕ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು .
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು .
ನವಲಗುಂದ ಕ್ಷೇತ್ರದ 37 ಗ್ರಾಪಂಗಳಿಗೆ ಭೇಟಿ ನೀಡಿದ್ದೇವೆ . ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕೊರೋನಾ ಜಾಗೃತಿ ಹೆಚ್ಚಾಗುತ್ತಿದೆ . ಜನರಿಗೆ ತೊಂದರೆಯಾಗದಂತೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2131 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು , ಇದರಲ್ಲಿ 1250 ಜನ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ .330 ಜನರು ಹೋಂ ಐಸೋಲೇಶನ್ ನಲ್ಲಿದ್ದು , ಇದುವರೆಗೆ 65 ಜನರು ಮೃತಪಟ್ಟಿದ್ದಾರೆ . ಕ್ಷೇತ್ರದ ಎಲ್ಲ ಪ್ರಜೆಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಲಾಗಿದೆ . ಕ್ಷೇತ್ರದಲ್ಲಿ ಒಟ್ಟು 22 ಕಾಳಜಿ ಕೇಂದ್ರಗಳನ್ನು ತೆರೆದು ರೋಗಿಗಳಿಗೆ ಉಚಿತ ಔಷಧ , ಊಟದೊಂದಿಗೆ ಧೈರ್ಯ ತುಂಬುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.
ಗ್ರಾಮೀಣ ಜನರು ಭಯ ಬಿಟ್ಟು ವ್ಯಾಕ್ಸಿನ್ ಪಡೆಯಲು ಮುಂದಾಗುವಂತೆ ಅಂಗನವಾಡಿ , ಆಶಾ ಕಾರ್ಯಕರ್ತೆಯರು ನಿರಂತರ ಶ್ರಮಿಸುತ್ತಿದ್ದಾರೆ . ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖ ಆಗುತ್ತಿರುವುದು ಸಂತಸದ ವಿಷಯ ಎಂದರು .
ದೇಶಪಾಂಡೆ ಫೌಂಡೇಶನ್ ಸಹಯೋಗದಲ್ಲಿ ಉಕ ಭಾಗದಲ್ಲಿಯೇ ಪ್ರಥಮವಾಗಿ ತಾಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಕೇಂದ್ರ ಸ್ಥಾಪನೆಯಾಗುತ್ತಿದೆ . ಇದಲ್ಲದೇ ನಿರಾಮಯ ಫೌಂಡೇಶನ , ಎಬಿವಿಪಿ , ಆರ್.ಎಸ್ . ಎಸ್ . ಹಾಗೂ ಕ್ಷಮತಾ ಸಂಘಟನೆಗಳು ಮುಕ್ತ ಮನಸ್ಸಿನಿಂದ ನಾನಾ ರೀತಿಯ ಸಹಕಾರ ನೀಡುತ್ತಿರುವುದು ಅಭಿನಂದನೀಯ ಹಾಗೂ ಪಕ್ಷ , ಜಾತಿ ಮೀರಿ ದಾನಿಗಳು ದಾನ ಮಾಡಲು ಮುಂದಾಗಿದ್ದಾರೆ . ಇನ್ನು ಕೆಲವರು ಎಲೆಮರೆ ಕಾಯಿಯಂತೆ ಬಡಜನರ ಸೇವೆಗೆ ಮುಂದಾಗಿದ್ದಾರೆ . ಕೊರೊನಾ ಸೇನಾನಿಗಳಿಗೆ , ರೋಗಿಗಳಿಗೆ ಸೇವೆ ಮಾಡುತ್ತಿರುವುದು ಶ್ಲಾಘನೀಯವಾದದ್ದು ಎಂದರು .
ತಹಸೀಲ್ದಾರ್ ನವೀನ ಹುಲ್ಲೂರ , ಮುಖ್ಯ ವೈದ್ಯಾಧಿಕಾರಿ ಡಾ . ಹೊನಕೇರಿ , ಪಿಎಸ್‍ಐ ಜಯಪಾಲ ಪಾಟೀಲ, ಎಸ್ .ಬಿ.ದಾನಪ್ಪಗೌಡ್ರ , ಶಿದ್ದಣ್ಣ ಕಟಗೇರಿ ಉಪಸ್ಥಿತರಿದ್ದರು.