ನವರಸ ನಾಯಕ ಜಗ್ಗೇಶ್ ಕಲಾ‌ ಬದುಕಿಗೆ 40ರ ಹರೆಯ

ಬೆಂಗಳೂರು, ನ.7- ಕನ್ನಡ ಚಿತ್ರರಂಗದಲ್ಲಿ ಹಂತಹಂತವಾಗಿ ಮೇಲೆ ಬಂದು ಚಿತ್ರರಂಗದ ಪ್ರಮುಖ ಆಧಾರಸ್ತಂಭಗಳಲ್ಲಿ ಒಬ್ಬರಾಗಿರುವ ನವರಸನಾಯಕ ಜಗ್ಗೇಶ್ ಅವರ ಕಲಾ ಬದುಕಿಗೆ ಇದೀಗ 40ರ ಹರೆಯ.

1980 ರ ನವಂಬರ್ 17 ರಂದು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಜಗ್ಗೇಶ್ ಅವರಿಗೆ ‌ 40 ವರ್ಷ ಪೂರ್ಣಗೊಳ್ಳಲಿದೆ.ಹೀಗಾಗಿ ನವಂಬರ್ ತಿಂಗಳು ಅವರ ಚಿತ್ರ ಬದುಕಿನಲ್ಲಿ ಅಚ್ಚಳಿಯದೆ ಉಳಿದಿರುವ ತಿಂಗಳು.

ಹೀಗಾಗಿ ಚಿತ್ರ ಬದುಕಿಗೆ 40 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ತಮ್ಮ ಹಳೆಯ ದಿನಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೆನಪು ಮಾಡಿಕೊಂಡಿದ್ದಾರೆ.

ಸಾಮಾನ್ಯ ರೈತ ಕುಟುಂಬದ ಸದಸ್ಯ ನಾನು.. ಇಂದು ಈ ತಿಂಗಳ 17 ಕ್ಕೆ ರಾಯರ ಹಾಗು ಅಮ್ಮನ ಆಶೀರ್ವಾದದಿಂದ 40ವರ್ಷ ಆಗುತ್ತದೆ ಕಲಾಬದುಕಿಗೆ!ನಂಬಿಕೆ ಗುರಿ ಏಕಾಗ್ರತೆ ವ್ರತದಂತ ಯಾವುದೆ ಕಾರ್ಯಮಾಡಿದರು ಯಶಸ್ಸು ಕಟ್ಟಿಟ್ಟಬುತ್ತಿ! ಎಂದು ಹೇಳಿಕೊಂಡಿದ್ದಾರೆ.

ಇದಕ್ಕೆ ಅಪಮಾನ ಅವಮಾನ ಮೂಲ ಮೆಟ್ಟಿಲು!ಸಹನೆ ತಾಳ್ಮೆ ತಪಸ್ಸು!
ನನ್ನ 40ವರ್ಷ ಸಿನಿಪಯಣ ಪ್ರೋತ್ಸಾಹಿಸಿದ ನಿರ್ದೇಶಕ ನಿರ್ಮಾಪಕ ಮಾಧ್ಯಮಮಿತ್ರರು ಕನ್ನಡಿಗರಿಗೆ ಶಿರಬಾಗಿ ವಂದನೆ‌ ಎಂದು ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ

ನಗಬೇಕು ನಗಿಸಬೇಕು ಕೊನೆ ಉಸಿರಿನವರೆಗೆ ಅದೆ ನನ್ನ ವ್ರತ…ಹರಸಿ ಹಾರೈಸಿ ನಿಮ್ಮೆಲ್ಲರ ಪ್ರೀತಿ ಅಭಿಮಾನ ಇರಲಿ ಎಂದು ಕೇಳಿಕೊಂಡಿದ್ದಾರೆ.

ಸಾಮಾನ್ಯ ರೈತನ ಮಗನೊಬ್ಬ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ನಾಯಕನಾಗಿ ಚಿತ್ರರಂಗದಲ್ಲಿ ಬೆಳೆದು ನಿಲ್ಲುವ ಪರಿ ಸೋಜಿಗ. ಅದನ್ನು ಊಹಿಸುವುದು ಕಷ್ಟ ಸಾಧ್ಯ ತನಗಾದ ಅವಮಾನ ಅಪಮಾನಗಳನ್ನು ಮೀರಿನಿಂತು ಇದೀಗ ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆದು ಅನೇಕರಿಗೆ ಆಶ್ರಯ ನೀಡುವ ಮಟ್ಟಕ್ಕೆ ಬಂದಿದ್ದಾರೆ.

ಶುಭ ಹಾರೈಕೆಗಳ‌ ಮಹಾಪೂರ:

ಜಗ್ಗೇಶ್ ಅವರ ಕಲಾ ಬದುಕಿಗೆ 40ವರ್ಷ ಪೂರ್ಣಗೊಳ್ಳುತ್ರಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಚಿತ್ರರಂಗದ ಗಣ್ಯರು ಶುಭಾಶಯಗಳು ಮಹಾಪೂರವನ್ನೇ ಹರಿಸಿದ್ದಾರೆ.

ಜಗ್ಗೇಶ್ ಅವರು ಮಾಡಿರುವ ಪೋಸ್ಟ್ಗೆ ಸಾವಿರಾರು ಅಭಿಮಾನಿಗಳು ಶುಭಹಾರೈಸಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದ್ದಾರೆ.