ನವಯುಗದ ಸೇವೆ ಬ್ಯಾಂಕ್ ಸನ್ನದ್ಧ

ಅಳ್ನಾವರ,ಡಿ.21- ಆರು ದಶಕಗಳ ಪಯಣದಲ್ಲಿ ಗ್ರಾಹಕರ ಹಿತ ಕಾಪಾಡುವದರ ಜೊತೆಗೆ ರೂ ದೃಷ್ಟಿ ವಿಚಾರಧಾರೆ ಹಾಗೂ ಗ್ರಾಹಕ ಕೇಂದ್ರಿಕೃತ ಮತ್ತು ನಂಬಿಕೆಯ ಪರಂಪರೆ ಕಾಪಾಡಲು ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ನವಯುಗದ ಸೇವೆ ನಮ್ಮ ಬ್ಯಾಂಕ್ ಸನ್ನದ್ದವಾಗಿದೆ ಎಂದು ಅಧ್ಯಕ್ಷ ಬಸವರಾಜ ತೇಗೂರ ಹೇಳಿದರು.
ಇಲ್ಲಿನ ಉಮಾ ಭವನದಲ್ಲಿ ನಡೆದ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ 63 ನೇ ವಾರ್ಷಿಕ ಮಹಸಭೆಯ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿ ಮಂಡನೆ ಮಾಡಿ ಮಾತನಾಡಿದ ಅವರು, ಸದಸ್ಯರ ಮತ್ತು ಗ್ರಾಹಕರ ಬದಲಾಗುತ್ತಿರುವ ಅವಶ್ಯಕತೆಗಳು ಮತ್ತು ಅನುಕೂಲಕ್ಕೆ ತಕ್ಕಂತೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಗುರುತರ ಜವಾಬ್ದಾರಿ ಆಡಳಿತ ಮಂಡಳಿ ಸಮರ್ಥವಾಗಿ ನಿಬಾಯಿಸಿದೆ ಎಂದರು.
ಸಹಕಾರ ವಲಯದ ಉನ್ನತವಾದ ಧ್ಯೇಯ ಹಾಗೂ ಮೌಲ್ಯಗಳ ಆಧಾರದ ಅಡಿಯಲ್ಲಿ ಜನರ ಆರ್ಥಿಕ ಅವಶ್ಯಕತೆ ಪೂರೈಸಿ ನೈತಿಕ ವ್ಯವಹಾರ ಪದ್ದತಿ ಅನುಸರಿಸಲಾಗಿದೆ. ಗ್ರಾಹಕರ ಹಿತ ಕಾಪಾಡುವ ಸಾಮಾಜಿಕ ಹೊಣೆಗಾರಿಕೆ ಸಮರ್ಥವಾಗಿ ನೇರವೇರಸಲು ಆಡಳಿತ ಮಂಡಳಿ ಶ್ರಮಿಸುತ್ತಿದೆ. ಕೊರೊನಾ ಕಾಲಘಟ್ಟದಲ್ಲಿ ಕೂಡಾ ನಿಗದಿತ ಗುರಿ ಮತ್ತು ಯೋಜನೆಗಳಂತೆ ಕಾರ್ಯ ನಿರ್ವಹಿಸಲಾಗಿದೆ ಎಂದರು.
ಬ್ಯಾಂಕ್ ರೂ. 2.24 ಕೋಟಿ ಶೇರು ಬಂಡವಾಳ ಹೊಂದಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆರ್ಥಿಕ ಕ್ಷೇತ್ರದ ಬದಲಾವಣೆ ಮಧ್ಯ ಬ್ಯಾಂಕ್ ಯಶಸ್ವಿಯಾಗಿ ಕಾರ್ಯ ನಿರ್ವಹಿದಪರಿಣಾಮ ಠೇವಣಿ ಸಂಗ್ರಹದಲ್ಲಿ ಉತ್ತಮ ಪ್ರಗತಿ ಸಾದಿಸಲಾಗಿದೆ. ಕಳೆದ ಸಾಲಿನ ಕೊನೆಯಲ್ಲಿ ಒಟ್ಟಾರೆ ರೂ. 54.43 ಕೋಟಿ ಇದ್ದ ಠೇವಣಿ ವರದಿ ವರ್ಷದಲ್ಲಿ ರೂ. 59.35 ಕೋಟಿ ಸಂಗ್ರಹವಾಗಿದೆ. ಇದು ಗ್ರಾಹಕರು ನಮ್ಮ ಬ್ಯಾಂಕಿನ ಮೇಲೆ ಇಟ್ಟ ವಿಶ್ವಾಸದ ಪ್ರತೀಕ. ರೂ. 67.37 ಕೋಟಿ ದುಡಿಯುವ ಬಂಡವಾಳ , ರೂ. 43.83 ಲಕ್ಷ ಲಾಭ ಗಳಿಸಿದೆ. ವಾರ್ಷಿಕ ವಹಿವಾಟು ರೂ. 341.65 ಕೋಟಿ ಆಗಿದೆ ಎಂದರು.
ಆರ್ಥಿಕ ವ್ಯವಹಾರದ ಜೊತೆಗೆ ಸಾಮಾಜಿಕವಾಗಿ ಜವಾಬ್ದಾರಿ ತೋರಲು ಬ್ಯಾಂಕ್ ಸದಾ ಮುಂದೆ ಇದೆ. ಪ್ರತಿ ವರ್ಷ ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ಬಹುಮಾನ ನೀಡುತ್ತಾ ಬರಲಾಗಿದೆ. ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದೆ. ಪ್ರಧಾನ ಮಂತ್ರಿಗಳ ಕೊರೊನಾ ನಿಧಿಗೆ ರೂ. ಒಂದು ಲಕ್ಷ, ಮುಖ್ಯ ಮಂತ್ರಿಗಳ ಪ್ರವಾಹ ಸಂತ್ರಸ್ಥರ ನಿಧಿಗೆ ರೂ. 51 ಸಾವಿರ, ಅಳ್ನಾವರ ತಾಲ್ಲೂಕ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ತಾಲ್ಲೂಕ ಮಟ್ಟದ ಕ್ರೀಡಾಕೂಟಕ್ಕೆ ತಲಾ ರೂ. 5 ಸಾವಿರ ದೇಣಿಗೆ ನೀಡಲಾಗಿದೆ ಎಂದರು.
ಶಾಂಭವಿ ದೇಗಾವಿಮಠ ಪ್ರಾರ್ಥಿಸಿದರು. ಹಿಂದಿನ ವಾರ್ಷಿಕ ಮಹಾಸಭೆಯ ಠರಾವುಗಳನ್ನು ಬಿ.ಜಿ.ಬಾಗೇವಾಡಿ ಓದಿದರು. ಲೆಕ್ಕ ಪರಿಶೋಧನಾ ವರದಿ, ಆರ್ಥಿಕ ತನಿಕೆಗಳ ಪರಿಗಣನೆ ವರದಿಯನ್ನು ಆರ್,ಜೆ. ಪಟ್ಟಣ ಮಂಡಿಸಿದರು. ಅಗಲಿದ ಸದಸ್ಯರ ಹಾಗೂ ಈಚೆಗೆ ನಿಧನರಾದ ಹಾಲಿ ಸದಸ್ಯ ಶಿವಾನಂದ ಹೊಸಕೇರಿ ಅವರ ಆತ್ಮಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.
ಬಿ.ಬಿ. ತೇಗೂರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರೂಪೇಶ ಗುಂಡಕಲ್, ನಿರ್ದೇಶಕರಾದ ದುಂಡಮ್ಮ ತೇಗೂರ, ನಾರಾಯಣ ಗಡಕರ, ಎಸ್.ಜಿ. ಜಕಾತಿ, ಸಿ.ಕೆ ಪೋಕಾರ, ಮಧು ಬಡಸ್ಕರ್ , ಸಂಧ್ಯಾ ಅಂಬಡಗಟ್ಟಿ, ಎ.ವಿ. ಉಡುಪಿ, ಜೆ.ಆರ್. ತೊಲಗಿ, ಆರ್.ಎ. ಅಷ್ಟೇಕರ, ಎಂ.ಆರ್. ಗಾಣಿಗೇರ, ಎನ್. ಪಿ. ಹಂಜಗಿ, ಎಫ್, ಎಸ್. ಮೇದಾರ, ಎ. ಎಸ್.
ಹಿರೇಮಠ, ಪಿ.ಜಿ.ಮಟ್ಟಿ ಇದ್ದರು.
ಛಗನಲಾಲ ಪಟೇಲ ಸ್ವಾಗತಿಸಿದರು. ಜಾವಿದ್ ತೊಲಗಿ ನಿರೂಪಿಸಿದರು. ರಾಜು ಅಷ್ಠೇಕರ್ ವಂದಿಸಿದರು.