ನವತಾರ್ ರಂಗಿನಲ್ಲಿ ಚಂದನವನದ ಸುಂದರಿಯರು

ಸೆಲೆಬ್ರಿಟಿ ಡಿಸೈನರ್ ಭಾರ್ಗವಿ ವಿಖ್ಯಾತಿ ದಸರಾ ಪ್ರಯುಕ್ತ ನವತಾರ್ ಹೆಸರಿನ ಕಲರ್ಫುಲ್ ಕಾನ್ಸೆಪ್ಟ್ ಜತೆಗೆ ಆಗಮಿಸಿದ್ದಾರೆ.
ನವರಾತ್ರಿಯ ಸಮಯದಲ್ಲಿ ಒಂಭತ್ತು ದೇವಿಯರ ಪೂಜಾಚರಣೆ ಪರಿಕಲ್ಪನೆಯಡಿಯಲ್ಲಿ ನವತಾರ್ ಫೋಟೋಶೂಟ್‍ ಮತ್ತು ವಸ್ತ್ರ ವಿನ್ಯಾಸ ಮಾಡಿದ್ದಾರೆ ಭಾರ್ಗವಿ ವಿಖ್ಯಾತಿ.

9 ಸಿನಿಮಾ ಸೆಲೆಬ್ರಿಟಿಗಳನ್ನು ಆಯ್ದುಕೊಂಡು ಅವರಿಗೆ ಬಗೆಬಗೆ ರೀತಿಯ ಕಾಸ್ಟೂಮ್‍ ವಿನ್ಯಾಸ ಮಾಡಿ, ಫೋಟೋಶೂಟ್‍ ಮಾಡಿಸಿದ್ದಾರೆ ‘ಇಲ್ಲಿ ದೇವಿಯರ ಅವತಾರವನ್ನು ಸೃಷ್ಟಿಸಲಾಗಿಲ್ಲ. ಬದಲಿಗೆ ಅವರನ್ನೇ ಹೋಲುವ ಮತ್ತು ಅದಕ್ಕೆ ಒಂದಿಷ್ಟು ಮಾರ್ಡನ್ ಟಚ್‍ ಕೊಟ್ಟು ಫೋಟೋಶೂಟ್‍ ಮಾಡಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಭಾರ್ಗವಿ ವಿಖ್ಯಾತಿ.

ನಟಿ ಶ‍್ರೀಲೀಲಾ, ಮರಾಠಿ ಯುವರಾಣಿಯಾಗಿ ಕೈಯಲ್ಲಿ ಕತ್ತಿ ಹಿಡಿದು, ಕುದುರೆ ಏರಿ ಹಣೆ ಮೇಲೆ ಅರ್ಧ ಚಂದ್ರನನ್ನು ಧರಿಸಿ ಪೋಸ್‍ ನೀಡಿದ್ದಾರೆ. ದೀಪಿಕಾ ದಾಸ್ ಕೈಯಲ್ಲಿ ಕತ್ತಿ ಹಿಡಿದು, ಲೆಹೆಂಗಾ ತೊಟ್ಟು ಗಂಭೀರವಾದ ಮುಖಭಾವ ನೀಡಿ ಉತ್ತರ ಭಾರತದ ರಾಣಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ದಾಂಡಿಯಾ ನೃತ್ಯ ಮಾದರಿಯಲ್ಲಿ ಡಾನ್ಸ್ ಶೈಲಿಯ ಘರ್ಬಾ ಥರಹದ ಕಾಸ್ಟೂಮ್‍ನಲ್ಲಿ ಕಂಗೊಳಿಸಿದ್ದಾರೆ ನಿಶ್ವಿಕಾ ನಾಯ್ಡು.
ಹರ್ಷಿಕಾ ಪೂಣಚ್ಚ ಪಕ್ಕಾ ದಕ್ಷಿಣ ಭಾರತದ ಮಹಾರಾಣಿ ಅವತಾರ ಎತ್ತಿದ್ದಾರೆ. ಕೃಷಿ ತಾಪಂಡ ಹಳದಿ ಮತ್ತು ಕೇಸರಿ ರಂಗಿನಲ್ಲಿ ಮುಳುಗಿದ್ದಾರೆ. ಬಿಂದಿಗೆ ಹಿಡಿದು, ನೀರಿನ ಕೊಳದ ಪಕ್ಕ ಕುಳಿತಿದ್ದಾರೆ.
ನಟಿ ಕಾವ್ಯಾ ಶೆಟ್ಟಿ ವೀಣೆ ಹಿಡಿದು ಸರಸ್ವತಿಯಂತೆ ಗೋಚರವಾಗಿದ್ದಾರೆ. ಕಾವ್ಯಾ ಶಾಸ್ತ್ರಿ ಕಮಲದ ಹೂವಿನ ಮೇಲೆ ಕುಳಿತ ಭಂಗಿಯಲ್ಲಿ ಕಂಡರೆ, ಮಲೆನಾಡ ಹುಡುಗಿಯ ಸೊಗಡಿನಲ್ಲಿ ಸಂಪದ ಮಿಂಚಿದ್ದಾರೆ. ಇಂಡೋ ವೆಸ್ಟರ್ನ್ ಶೈಲಿ ಉಡುಗೆಯಲ್ಲಿ ಶಾಲಿನಿ ಗೌಡ ಕಾಣಿಸಿಕೊಂಡಿದ್ದಾರೆ. ಈ ಒಂಭತ್ತು ನಟಿಯರ ವಿನ್ಯಾಸಗಳ ಜತೆಗೆ ಇಡೀ ಡಿಸೈನಿಂಗ್‍ ತಂಡವೂ ತಮ್ಮದೇ ಆದ ವಿನ್ಯಾಸವೊಂದರಲ್ಲಿ ಮಿಂಚಿದೆ.

ಎಲ್ಲ ಒಂಭತ್ತು ಸೆಲೆಬ್ರಿಟಿಗಳ ಕಾಸ್ಟೂಮ್‍ ವಿನ್ಯಾಸದ ಜವಾಬ್ದಾರಿಯನ್ನು ಭಾರ್ಗವಿ ವಿಖ್ಯಾತಿ ವಹಿಸಿಕೊಂಡರೆ, ಮೇಕಪ್‍ ಆರ್ಟಿಸ್ಟ್ ಆಗಿ ನಿಖಿತಾ ಆನಂದ್‍ ಚೆಂದದ ಮೇಕಪ್‍ ಮಾಡಿದ್ದಾರೆ. ಎಲ್ಲರನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿದವರು ರೇನ್‍ಬೋ ಫೋಟೋಗ್ರಾಫಿಯ ಕಿರಣ್‍ ಮತ್ತು ಹೂವೇಶ್‍. ಶ‍್ವೇತಾ ಇಂಚರ್ ಇಡೀ ಕಾನ್ಸೆಪ್ಟ್ನಲ್ಲಿ ಭಾರ್ಗವಿ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಅಭೂಷಣ್ ಮತ್ತು ಆಮ್ರಪಾಲಿ ಜುವೆಲ್ಸ್ ಆಭರಣ ಡಿಸೈನ್ ಉಸ್ತುವಾರಿವಹಿಸಿಕೊಂಡಿದೆ.

ಕಳೆದ ನಾಲ್ಕು ವರ್ಷಗಳಿಂದ ಫ್ಯಾಷನ್‍ ಡಿಸೈನಿಂಗ್‍ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಭಾರ್ಗವಿ, ಶ್ರೀಲೀಲಾ, ಆರ್ಯನ್ ಸಂತೋಷ್, ಹರ್ಷಿಕಾ ಪೂಣಚ್ಚ ಸೇರಿ ಕೆಲ ಸೆಲೆಬ್ರಿಟಿಗಳ ಪರ್ಸನಲ್ ಸ್ಟೈಲಿಸ್ಟ್ ಆಗಿದ್ದಾರೆ. ಇದೀಗ ಇನ್ನೇನು ಬಿಡುಗಡೆ ಹಂತದಲ್ಲಿರುವ ಡಿಯರ್ ಸತ್ಯ ಚಿತ್ರಕ್ಕೂ ಮೊದಲ ಬಾರಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ
ಭಾರ್ಗವಿ.

‘ಸದ್ಯ ವಸ್ತ್ರ ವಿನ್ಯಾಸ ಕ್ಷೇತ್ರದಲ್ಲಿ ನಾಲ್ಕು ವರ್ಷ ಪೂರೈಸಿದ್ದೇನೆ. ಮುಂದಿನ ದಿನಗಳಲ್ಲಿ ಕನ್ನಡದ ಜತೆಗೆ ಪರಭಾಷೆಯಲ್ಲಿಯೂ ಈ ವೃತ್ತಿಯನ್ನು ವಿಸ್ತರಿಸುವ ಕನಸಿದೆ. ಅದರಂತೆ ಫ್ಯಾಷನ್‍ ಡಿಸೈನಿಂಗ್‍ಗೆ ಸಂಬಂಧಿಸಿದಂತೆ. ಬೃಹತ್‍ ಸ್ಟೋರ್ ತೆರೆಯುವ ಕನಸೂ ಇದೆ ಎನ್ನುತ್ತಾರೆ ಅವರು.

ಬಾಕ್ಸ್

ದಸರಾ ದೇವಿಯರ ಹಬ್ಬ ಈ ಒಂಭತ್ತು ದಿನದ ಸಂಭ್ರಮವನ್ನು ನವತಾರ್ ಮೂಲಕ ಆಚರಣೆ ಮಾಡಿದ್ದೇವೆ. ಸಿನಿಮಾ ತಾರೆಯರನ್ನು ಅವರವರ ಅಭಿಮಾನಿಗಳು ವಿವಿಧ ಫೋಟೋಶೂಟ್‍ ಮೂಲಕ ಕಣ್ತುಂಬಿಕೊಂಡಿದ್ದಾರೆ. ಇದೀಗ ಅದೆಲ್ಲದಕ್ಕೂ ವಿಭಿನ್ನವಾದ ಪ್ರಯೋಗ ಮಾಡಿದ್ದೇವೆ. ಕಲರ್ಫುಲ್ ಥೀಮ್‍ ಮತ್ತು ಪರಿಕಲ್ಪನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಶೈಲಿಯ ಉಡುಪುಗಳನ್ನು ವಿನ್ಯಾಸ ಮಾಡಿದ್ದೇನೆಎನ್ನುತ್ತಾರೆ ಭಾರ್ಗವಿ ವಿಖ್ಯಾತಿ.