ನವಜಾತ ಹೆಣ್ಣು ಮಗು ಕದ್ದು ಪರಾರಿಯಾಗಿದ್ದ ಮಹಿಳೆ ಸೆರೆ

ಬೆಂಗಳೂರು,ಮಾ.25-ಮನೆಗೆ ನುಗ್ಗಿ ನವಜಾತ ಹೆಣ್ಣು ಮಗು ಹಾಗೂ ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದ ಮಹಿಳೆಯನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಮಾಗಡಿ ರೋಡ್ ರೈಲ್ವೆ ಕ್ವಾಟ್ರಸ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿತ ಮಹಿಳೆ, ಮುಳಬಾಗಿಲು ಮೂಲದ ನಂದಿನಿ ಅಲಿಯಾಸ್ ಆಯೆಷಾಳನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಫರ್ಹೀನ್ ಎಂಬಾಕೆ ಇಂದು ಬೆಳಗ್ಗೆ ಕಲಾಸಿಪಾಳ್ಯದ ತನ್ನ ತಾಯಿಯ ಮನೆಯಲ್ಲಿ ತನ್ನ 42 ದಿನದ ನವಜಾತ ಹೆಣ್ಣು ಮಗುವಿಗೆ ಹಾಲುಣಿಸಿ ಮಗುವಿನೊಂದಿಗೆ ಮನೆಯ ಹಾಲ್​ನಲ್ಲಿ ನಿದ್ದೆಗೆ ಜಾರಿದ್ದರು. ಮನೆಯ ಬಾಗಿಲು ಹಾಕದ ಸಂದರ್ಭದಲ್ಲಿ ಬಂದಿದ್ದ ಆರೋಪಿ ಮಹಿಳೆ, ಮನೆಯೊಳಗೆ ನುಗ್ಗಿ ಮಗುವನ್ನು ಎತ್ತಿಕೊಂಡು ಮೊಬೈಲ್ ಫೋನ್ ಕೂಡ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಳು.ಮಗುವನ್ನು ಕಳ್ಳತನ ಮಾಡಿರುವ ಬಗ್ಗೆ ಕಲಾಸಿಪಾಳ್ಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಧ್ಯಾಹ್ನದ ವೇಳೆಗೆ ಸಾರ್ವಜನಿಕರು ಆರೋಪಿ ಮಹಿಳೆಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದು, ಮಗುವನ್ನು ಪೊಲೀಸರು ಪೋಷಕರ ವಶಕ್ಕೆ ನೀಡಿದ್ದಾರೆ. ಆರೋಪಿ ಮಹಿಳೆಯನ್ನು ದಸ್ತಗಿರಿ ಮಾಡಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.