ನಳಗಳಿಗೆ ಕಲುಶಿತ ನೀರು: ನಾಗರಿಕರ ಆಕ್ರೋಶ

ಕಲಬುರಗಿ,ಜೂ.5- ಮಹಾನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಇಲ್ಲಿನ ನಳಗಳಿಗೆ ಸರಬರಾಜು ಮಾಡುವ ನೀರನ್ನು ಶುದ್ಧಿಕರಿಸದೇ ನೆರವಾಗಿ ಕಲುಶಿತ ನೀರನ್ನೇ ಬಿಡುತ್ತಿರುವುದಕ್ಕೆ ಇಲ್ಲಿನ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಳಗಳಲ್ಲಿ ಬರುತ್ತಿರುವ ನೀರಿನಲ್ಲಿ ಹುಳಗಳಿದ್ದು, ತಿಳಿಹಸಿರು ಬಣ್ಣದಿಂದ ಕೂಡಿದೆ. ಇದರಲ್ಲಿ ಗಬ್ಬುವಾಸನೆಯೂ ಬರುತ್ತಿದೆ ಎಂದು ಅವರು ದೂರಿದ್ದಾರೆ.
ಯಾವುದಕ್ಕೂ ಬಳಸಲು ಯೋಗ್ಯವಿಲ್ಲದ ಈ ನೀರನ್ನು ಬಾಟಲುಗಳಲ್ಲಿ ತುಂಬಿ ಅಧಿಕಾರಿ ಸಿಬ್ಬಂದಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಬಡಾವಣೆಯ ನಾಗರಿಕರು ತಮ್ಮ ನೋವನ್ನು ಪತ್ರಿಕೆಯ ಮುಂದೆ ತೊಡಿಕೊಂಡಿದ್ದಾರೆ.
ನಗರದ ಬ್ರಹ್ಮಪೂರ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ರಾಘವೇಂದ್ರ ಕಾಲೋನಿ, ಕುಂಬಾರ ಗಲ್ಲಿ, ಶಾಸ್ತ್ರೀ ಚೌಕ್, ಆಜಾದ ಚೌಕ್ ಈ ಬಡಾವಣೆಗಲ್ಲಿ ಸರಬರಾಜು ಆಗುತ್ತಿರುವ ನಳಗಳ ನೀರು ಕಲುಷಿತಗೊಂಡಿದ್ದು, ಶುದ್ಧಿಕರಿಸಿದ ನೀರು ಸರಬರಾಜು ಮಾಡಬೇಕು ಎಂದು ಇಲ್ಲಿನ ನಾಗರಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.