ನಲಪಾಡ್ ವಿರುದ್ಧ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ದೂರು


ಬೆಂಗಳೂರು,ಏ.೨೨-ಒಂದಲ್ಲ ಒಂದು ರೀತಿಯ ವಿವಾದ ಜಗಳದಲ್ಲಿ ಸಿಲುಕುವ ಕಾಂಗ್ರೆಸ್ ಯುವ ನಾಯಕ ಮೊಹಮದ್ ನಲಪಾಡ್ ಹ್ಯಾರಿಸ್ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡ್ಡಿಸಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ ಎನ್ನುವರು ದೂರು ನೀಡಿದ್ದಾರೆ.
ನಲಪಾಡ್ ಮತ್ತು ಅವರ ಬೆಂಬಲಿಗರು ನಿನ್ನೆ ಕಚೇರಿಗೆ ಆಗಮಿಸಿ ಕರ್ತವ್ಯಕ್ಕೆ ಅಡ್ಡಿಪಡ್ಡಿಸಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾಗಿ ದೂರು ನೀಡಿರುವ ಭವ್ಯ ಅವರು ತಮಗೆ ಭದ್ರತೆ ನೀಡುವಂತೆ ಕೋರಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಕೋವಿಡ್ ವಾರ್ ರೂಂ ಸ್ಥಾಪನೆ ವಿಚಾರವಾಗಿ ನಲಪಾಡ್ ಹಾಗೂ ರಕ್ಷಾ ರಾಮಯ್ಯ ಹಾಗೂ ಬೆಂಬಲಿಗರ ನಡುವೆ ನಿನ್ನೆ ವಾಗ್ವಾದವಾಗಿತ್ತು.
ಗಲಾಟೆ ಬಳಿಕ ರಕ್ಷಾ ರಾಮಯ್ಯ ಬೆಂಬಲಿಗರಾದ ಭವ್ಯ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಲಪಾಡ್ ಗುಂಪು ತಮ್ಮ ಕಾರ್ಯಕರ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಬಳಿಕ ಮತ್ತೆ ಐದು ಜನರು ಬಂದು ‘ನಮ್ಮ ಬಾಸ್ ನಲಪಾಡ್ ವಿಷಯಕ್ಕೆ ಬಂದರೆ ಸುಮ್ಮನಿರಲ್ಲ’ ಎಂದು ಬೆದರಿಕೆ ಹಾಕಿದ್ದಾರೆ ಎಂದೂ ಹೇಳಿದ್ದಾರೆ.
ರಕ್ಷಾ ರಾಮಯ್ಯ ಬೆಂಬಲಿಗರಾಗಿದ್ದು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಭವ್ಯ ಅವರು ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ನಲಪಾಡ್ ಉಪಚುನಾವಣೆ ಸಂದರ್ಭದಲ್ಲೂ ಕಿರಿಕಿರಿ ಉಂಟು ಮಾಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಲಪಾಡ್‌ಗೆ ಚುನಾವಣೆಯಲ್ಲಿ ಹೆಚ್ಚಿನ ಮತ ಬಂದಿತ್ತು. ಆದರೆ ಅವರ ಹಿನ್ನೆಲೆಯನ್ನು ಗಮನಿಸಿ ಪಕ್ಷ ಸ್ಪರ್ಧೆಯಿಂದ ಅನರ್ಹಗೊಳಿಸಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇತರರಿಗೆ ವಿವಿಧ ಜವಾಬ್ದಾರಿ ನೀಡಲಾಗಿತ್ತು.
ಭವ್ಯ ದೂರಿನ ವಿವರ:
ಮೊಹಮ್ಮದ್ ನಲಪಾಡ್, ಭಾಸ್ಕರ್, ಗೋವರ್ಧನ್, ಆಗಸ್ಟಿನ್ ಹಾಗೂ ಇತರೆ ೧೫ ಕ್ಕೂ ಹೆಚ್ಚು ಜನರ ವಿರುದ್ಧ ದೂರು ನೀಡಿರುವ ಭವ್ಯ ಅವರು
ನಲಪಾಡ್ ಬೆದರಿಕೆ ಬಗ್ಗೆ ಸಂಪೂರ್ಣ ವಿವರ ಹಾಗೂ ಇತಿಹಾಸ ಉಲ್ಲೇಖಿಸಿದ್ದಾರೆ.
ಯುವ ಕಾಂಗ್ರೆಸ್ ಕಚೇರಿಗೆ ಏಕಾಏಕಿಯಾಗಿ ಬಂದು ನನ್ನನ್ನು ಗುರಿಯಾಗಿಸಿಕೊಂಡು ಬೈಯ್ದು ಹೊಡೆಯುವ ಹಾಗೆ ಕೈ ತೋರಿಸಿದ್ದಾರೆ.ನನಗೆ ಹಾಗೂ ನನ್ನ ಸಹೋದ್ಯೋಗಿಗಳಿಗೆ ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಬಸವ ಕಲ್ಯಾಣ ಕ್ಷೇತ್ರದ ಉಪಚುನಾವಣೆ ವೇಳೆ ತಮ್ಮ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿರುವ ಬಗ್ಗೆಯೂ ಭವ್ಯ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ದೂರಿನಲ್ಲಿ ಆರೋಪ:
ಬಸವ ಕಲ್ಯಾಣದಲ್ಲಿ ನಡೆದ ಚುನಾವಣೆ ಪ್ರಚಾರಕ್ಕೆ ಹೋದಾಗ ಸಹ ತೊಂದರೆಯನ್ನು ಕೊಟ್ಟಿದ್ದಾರೆ. ನಲಪಾಡ್ ಹಾಗೂ ಬೆಂಬಲಿಗರು ನನ್ನ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ದೆಹಲಿಯಲ್ಲೂ ಕೂಡ ನಲಪಾಡ್ ನನ್ನ ಮೇಲೆ ಕೂಗಾಡಿ, ಕೆಲ ಶಾಸಕರು ಹಾಗೂ ಕೆಪಿಸಿಸಿ ಕಾರ್ಯದರ್ಶಿಗಳಿಗೇ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿದ್ದ ಬಗ್ಗೆ ದೂರಿನಲ್ಲಿ ಆರೋಪಿಸಿದ್ದಾರೆ.
ನಲಪಾಡ್ ಹಾಗೂ ಬೆದರಿಕೆ ಹಾಕಿದ ಅವರ ಬೆಂಬಲಿಗರೆಲ್ಲರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ, ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಭವ್ಯ ಮನವಿ ಮಾಡಿಕೊಂಡಿದ್ದಾರೆ. ನಲಪಾಡ್ ಹಾಗೂ ಬೆಂಬಲಿಗರು ನನಗೆ ಏನು ಮಾಡಲಿದ್ದಾರೆಯೋ ಎಂಬ ಭಯವಿದೆ, ನನಗೆ ರಕ್ಷಣೆ ಕೊಡಿ ಎಂದು ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ ಪೊಲೀಸರ ಮೊರೆ ಹೋಗಿದ್ದಾರೆ. ನಲಪಾಡ್ ಹಾಗೂ ಬೆಂಬಲಿಗರು ನನಗೆ ಹಿಂಸಿಸುತ್ತಿದ್ದಾರೆ ಎಂದು ಉಲ್ಲೇಖಿಸಿರುವ ಭವ್ಯ, ಪೊಲೀಸರಿಗೆ ಮೂರು ಪುಟಗಳ ಸುದೀರ್ಘ ದೂರು ನೀಡಿದ್ದಾರೆ.