ನಲಪಾಡ್ ವಿರುದ್ಧ ಪ್ರಕರಣ ದಾಖಲು

ಚಿಕ್ಕಮಗಳೂರು.ಏ೧:ದ್ವೇಷ ಭಾಷಣ ಮಾಡಿದ ಆರೋಪದ ಮೇರೆಗೆ ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಮೊಹಮದ್ ಹ್ಯಾರಿಸ್ ನಲಪಾಡ್ ವಿರುದ್ಧ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾರ್ಚ್ ೨೩ರಂದು ನಡೆದ ಕಾರ್ಯಕ್ರಮದಲ್ಲಿ ನಲಪಾಡ್ ಅವರು ದ್ವೇಷ ಭಾಷಣ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಕಡೂರು ತಾಲ್ಲೂಕು ಹಸ್ತಿನಾಪುರದ ಎಚ್.ಬಿ.ಪ್ರದೀಪ್ ನಾಯಕ್ ಸಖರಾಯಪಟ್ಟಣ ದೂರು ನೀಡಿದ್ದರು. ಆದರೆ, ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಕಡೂರು ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡಿತ್ತು ಎಂದು ಪ್ರದೀಪ್ ಪರ ವಕೀಲ ರಾಜಣ್ಣ ತಿಳಿಸಿದರು.
ನಲಪಾಡ್ ಅವರು ಗಾಂಧಿ ಹೈ ಸಾವರ್ಕರ್ ನಹಿ ಎಂಬ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ್ದಾರೆ. ‘ಮೋದಿ ಸರ್ ನೇಮ್ ಇರುವವರು ಏಕೆ ಕಳ್ಳರಾಗಿರುತ್ತಾರೆ’ ಎಂದು ಹೇಳಿ ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಅವರ ಆ ಹೇಳಿಕೆಯನ್ನೇ ನಲಪಾಡ್ ಹೇಳಿದ್ದಾರೆ. ಅಲ್ಲದೇ ತನ್ನ ವಿರುದ್ಧ ಪ್ರಕರಣ ದಾಖಲಿಸಲಿ ನೋಡೋಣ ಎಂದೂ ಸವಾಲು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.