ನರ್ಸಿಂಗ್ ಹೋಂ ಮುಚ್ಚಿರುವುದರಿಂದ ರೋಗಿಗಳ ಪರದಾಟ

ಹನೂರು: ಮೇ.30: ಕೊವೀಡ್ ನಿಯಮಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲದೇ ಇರುವುದರಿಂದ ಜಿಲ್ಲಾಧಿಕಾರಿಗಳು ಪಟ್ಟಣದ ಸ್ನೇಹ ನರ್ಸಿಂಗ್ ಹೋಂ ಮತ್ತು ಭಾರತೀ ನರ್ಸಿಂಗ್ ಹೋಂ ವೈದ್ಯರಿಗೆ ಕಾರಣ ಕೇಳಿ ನೋಟಿಸ್ ನೀಡಿದ ಬೆನ್ನೆಲೆ ಈ ಎರಡು ನರ್ಸಿಂಗ್ ಹೋಂ ವೈದ್ಯರು ಸೀಮಿತ ಮಂದಿಗೆ ಟೋಕನ್ ನೀಡಿ ವೈದ್ಯಕೀಯ ಸೇವೆ ಒದಗಿಸಿ ಬಾಗಿಲು ಮುಚ್ಚುತ್ತಿರುವುದರ ಜೊತೆಗೆ ಪಟ್ಟಣದ ಇನ್ನಿತರೆ ಕ್ಲೀನಿಕ್‍ಗಳು ಬಾಗಿಲು ಮುಚ್ಚಿರುವುದರಿಂದ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.
ಸ್ನೇಹ ಮತ್ತು ಭಾರತೀ ನರ್ಸಿಂಗ್ ಹೋಂ ಖಾಸಗಿ ಆಸ್ಪತ್ರೆಗಳ ಜೊತೆಗೆ ಎಂ.ಎಂ. ಕ್ಲೀನಿಕ್ ಕೂಡ ಸೀಮಿತ ಮಂದಿಗೆ ಚಿಕಿತ್ಸೆ ನೀಡುತ್ತಿದ್ದು, ಉಳಿದ ವೆಂಕಟೇಶ್ವರ, ಮಂಜುನಾಥ, ನಂದಾ, ಪ್ರಸನ್ನ, ಎಸ್‍ಪಿವಿ, ಪ್ರಸನ್ನ ಕ್ಲೀನಿಕ್‍ಗಳು ಬಾಗಿಲು ಮುಚ್ಚಿರುವುದರಿಂದ ರೋಗಿಗಳು ವೈದ್ಯಕೀಯ ಸೇವೆ ಪಡೆಯಲು ಇನ್ನಿಲ್ಲದ ಪಡಿಪಾಟಿಲು ಪಡುವಂತಾಗಿದೆ.
ಕೊವೀಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಕೋವಿಡ್ ನಿಯಮಗಳನ್ನು ಸರಿಯಾದ ರೀತಿ ಪಾಲನೆ ಮಾಡಿ ಜನತೆಗೆ ವೈದ್ಯಕೀಯ ಸೇವೆ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‍ಕುಮಾರ್ ಹಾಗೂ ಜಿಲ್ಲಾಧಿಕಾರಿಗಳು ಸೂಚನೆ ನೀಡಿರುವುದರಿಂದ ಕುಪಿತಗೊಂಡವರಂತೆ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡದೇ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೇಯೇ ? ಈ ಖಾಸಗಿ ಕ್ಲಿನಿಕ್‍ನವರು ಎಂಬ ಪ್ರಶ್ನೆ ಜೊತೆಗೆ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇತ್ತಾ ಗಮನಹರಿಸಿ ಕೂಡಲೇ ಸೀಮಿತ ಮಂದಿಗೆ ಚಿಕಿತ್ಸೆ ನೀಡುತ್ತಿರುವ ಮೂರು ಖಾಸಗಿ ಕ್ಲೀನಿಕ್‍ಗಳ ವೈದ್ಯರು ಹಾಗೂ ಸಂಪೂರ್ಣ ಬಾಗಿಲನ್ನು ಮುಚ್ಚಿರುವ ಖಾಸಗಿ ಕ್ಲಿನಿಕ್‍ಗಳ ಬಾಗಿಲನ್ನು ತೆಗೆಸಿ ಸಾರ್ವಜನಿಕರಿಗೆ ವೈದ್ಯಕೀಯ ಸೇವೆಯನ್ನು ಒದಗಿಸುವ ಮೂಲಕ ಜನತೆಯನ್ನು ಸಂಕಷ್ಟದಿಂದ ದೂರ ಮಾಡಬೇಕಾಗಿದೆ ಎಂದು ರೋಗಿಗಳು ಮತ್ತು ಪ್ರಜ್ಞಾವಂತ ನಾಗರೀಕರು ಒತ್ತಾಯಿಸಿದ್ದಾರೆ.