ನರ್ಸಿಂಗ್ ಕರ್ಮಕಾಂಡ ತನಿಖೆಗೆ ಪಟ್ಟು ಮಾತಿನ ಚಕಮಕಿ ಪರಿಷತ್ ಮುಂದೂಡಿಕೆ

ಬೆಂಗಳೂರು, ಮಾ. ೧೯- ರಾಜ್ಯದ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಕಾಲೇಜುಗಳಿಗೆ ಹೊಸದಾಗಿ ಪರವಾನಗಿ ನೀಡಿರುವ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಇದರ ತಪಾಸಣೆಗೆ ಸದನ ಸಮಿತಿ ರಚಿಸುವಂತೆ ಮಾಡಿದ ಆಗ್ರಹವನ್ನು ಸರ್ಕಾರ ತಳ್ಳಿ ಹಾಕಿದ ಹಿನ್ನೆಲೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ ನಡೆದು ವಿಧಾನ ಪರಿಷತ್ತಿನಲ್ಲಿ ಕೋಲಾಹಲದ ವಾತಾವರಣ ಸೃಷ್ಠಿಯಾಯಿತು.
ಸದನ ಸಮಿತಿ ರಚಿಸಬೇಕು ಎನ್ನುವ ಪ್ರತಿಪಕ್ಷಗಳ ಆಗ್ರಹ ಸರಿಯಲ್ಲ. ಅದರ ಬದಲು ಮೂವರು ತಜ್ಞರ ಉನ್ನತ ಮಟ್ಟದ ಸಮಿತಿ ರಚಿಸಿ ೩ ತಿಂಗಳು, ಇಲ್ಲವೇ ೬ ತಿಂಗಳ ಒಳಗೆ ವರದಿ ಬಂದ ನಂತರ ಪರಿಶೀಲನೆ ನಡೆಸಿ ಅರ್ಹ ಕಾಲೇಜುಗಳಿಗಷ್ಟೆ ಅನುಮತಿ ನೀಡೋಣ ಎನ್ನುವ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರ ಹೇಳಿಕೆಗೆ ವಿಪಕ್ಷಗಳ ಸದಸ್ಯರು ಕಿವಿಕೊಡದೆ ಆರೋಪ-ಪ್ರತ್ಯಾರೋಪ ನಡೆಸಿ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ, ಭ್ರಷ್ಟಾಚಾರದ ಆರೋಪ ನಡೆದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.
ಇದಕ್ಕೂ ಮುನ್ನ ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿ ಸದನ ಸಮಿತಿ ರಚನೆಗೆ ಪಟ್ಟು ಹಿಡಿದಿದ್ದರು. ಇದಕ್ಕೆ ಕಾಂಗ್ರೆಸ್ ಕೂಡಾ ದನಿಗೂಡಿಸಿತು.
ಇದನ್ನು ಸರ್ಕಾರ ಒಪ್ಪದ ಹಿನ್ನೆಲೆಯಲ್ಲಿ ಕೆಲ ಕಾಲ ಕಲಾಪವನ್ನು ಮುಂದೂಡಲಾಗಿತ್ತು. ಮತ್ತೆ ಸದನ ಸದನ ಆರಂಭವಾದ ಮೇಲೂ ಜೆಡಿಎಸ್ ಸದಸ್ಯರು ಧರಣಿ ಮುಂದುವರೆಸಿ ಸದನ ಸಮಿತಿಗೆ ಪಟ್ಟು ಹಿಡಿದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ, ನಿಮ್ಮ ಕಚೇರಿಯಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ಸದನಕ್ಕೆ ತಿಳಿಸಿ ಎಂದು ಸಭಾಪತಿಗಳಲ್ಲಿ ಮನವಿ ಮಾಡಿದರು.
ಅದಕ್ಕೆ ಸಭಾಪತಿಗಳು ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ನೀಡಿರುವ ಕ್ರಮದ ಕುರಿತು ಜೆಡಿಎಸ್ ಸದಸ್ಯರು ಸದನ ಸಮಿತಿಗೆ ಮನವಿ ಮಾಡಿದ್ದಾರೆ. ಆದರೆ ಸರ್ಕಾರ ಇದನ್ನು ಒಪ್ಪಿಕೊಳ್ಳುತ್ತಿಲ್ಲ,. ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವರು ಏನು ಹೇಳುತ್ತಾರೋ ಕೇಳೋಣ ಎಂದು ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ. ಕೆ. ಸುಧಾಕರ್, ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಪರವಾನಗಿ ನೀಡಿದ್ದಾರೆ. ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಬೆಳವಣಿಗೆಯಾಗಲು ಸರ್ಕಾರದ ಜತೆಗೆ ಖಾಸಗಿಯವರ ಪಾಲೂ ಇದೆ. ಭಾರತೀಯ ನರ್ಸಿಂಗ್ ಮಂಡಳಿ ಪ್ರಕಾರ ಕಲಾ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ನರ್ಸಿಂಗ್‌ಗೆ ಅವಕಾಶ ಮಾಡಿಕೊಟ್ಟಿಲ್ಲ. ಬದಲಾಗಿ ಬಿಎಸ್ಸಿ ನರ್ಸಿಂಗ್‌ಗೆ ಮಾತ್ರ ಅನುವು ಮಾಡಿಕೊಡಲಾಗಿದೆ ಎಂದರು.
೨೦೦೨ ರಲ್ಲಿ ೩೦೦ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅನುಮತಿ ನೀಡಲಾಗಿತ್ತು. ಆಗ ಏಕೆ ಸದನ ಸಮಿತಿ ಕೇಳಲಿಲ್ಲ. ನಾವು ಅನುಮತಿ ಕೊಟ್ಟಿರುವ ಕಾಲೇಜುಗಳಿಗೆ ಸದನ ಸಮಿತಿ ಕೇಳುತ್ತಿದ್ದೀರಿ. ಆದರೂ ಸದಸ್ಯರ ಆಗ್ರಹಕ್ಕೆ ಮನ್ನಣೆ ನೀಡಿ ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆ ಮಾಡೋಣ ಎಂದರು.
ಸಚಿವ ಸುಧಾಕರ್ ಅವರ ಹೇಳಿಕೆಗೆ ಜೆಡಿಎಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸದನ ಸಮಿತಿಗೆ ಪಟ್ಟು ಹಿಡಿದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅವರು, ಸದನದ ಸದಸ್ಯರ ಒಮ್ಮತದ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಸದನ ಸಮಿತಿ ರಚಿಸಲು ಸರ್ಕಾರಕ್ಕೆ ಸೂಚಿಸಿ ಸಭಾಪತಿಗಳಿಗೆ ಮನವಿ ಮಾಡಿದರು.
ಈ ಹಂತದಲ್ಲಿ ಕಾಂಗ್ರೆಸ್‌ನ ನಾರಾಯಣಸ್ವಾಮಿ ಅವರು ಈ ವಿಷಯದಲ್ಲಿ ರಿವಿಜನ್ ಆಗಲಿ, ಯಾರ ಅಭಿಪ್ರಾಯಗಳು ಹೆಚ್ಚು ಬರುತ್ತದೋ ಅದರಂತೆ ನಡೆದುಕೊಳ್ಳಿ ಎಂದರು.
ಈ ಹಂತದಲ್ಲಿ ಮತ್ತೆ ಮಾತಿನ ಚಕಮಕಿ, ಗದ್ದಲ ನಡೆಯಿತು. ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸದ್ಯದ ಪರಿಸ್ಥಿತಿ ಕಲಾಪ ನಡೆಸಲು ಸಾಧ್ಯವಿಲ್ಲ ಎಂದು ಹೇಳಿ, ಸೋಮವಾರ ಬೆಳಿಗ್ಗೆ ೧೦.೩೦ಕ್ಕೆ ಕಲಾಪವನ್ನು ಮುಂದೂಡಿದರು.

ಮಾನಮರ್ಯಾದೆ ಇದೆಯಾ.?
ಸದನದ ಬಾವಿಯಲ್ಲಿ ಮಾತನಾಡುತ್ತಿದ್ದ ಜೆಡಿಎಸ್‌ನ ಮರಿತಿಬ್ಬೇಗೌಡ ಅವರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ನಿಮಗೆ ಮಾನ ಮರ್ಯಾದೆ ಇದೆಯಾ, ಇದ್ದರೆ ಸುಮ್ಮನಿರಿ ಎಂದು ತಾಕೀತು ಮಾಡಿದರು.