ನರ್ಸರಿ ಅಭಿವೃದ್ದಿ ಕಾರ್ಯಕ್ರಮ ಉದ್ಘಾಟನೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.24: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪೌಷ್ಟಿಕಯುಕ್ತ ತರಕಾರಿಗಳನ್ನು ನಿಮ್ಮ ಜಮೀನು ಅಥವಾ ಮನೆಯ ಪಕ್ಕದ ಜಾಗದಲ್ಲಿ ತರಕಾರಿ, ಹಣ್ಣು, ಸಸ್ಯಗಳನ್ನು ಬೆಳೆಯಲು ಸರ್ಕಾರದಿಂದ ಕೂಲಿ ರೂಪದಲ್ಲಿ ದನಸಹಾಯ ನೀಡುವುದು ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.
ತಾಲೂಕಿನ ದೇಶನೂರು ಗ್ರಾಮದಲ್ಲಿನ ತೋಟಗಾರಿಕಾ ಕ್ಷೇತ್ರದ ಆವರಣದಲ್ಲಿ ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳ, ವಿನಾಯಕ ಸಂಜೀವಿನಿ ಮಹಿಳಾ ಸ್ವಸಹಾಯ ಗುಂಪುಗಳ ಒಕ್ಕೂಟದ ಸಹಯೋಗದಲ್ಲಿ ನರ್ಸರಿ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು 
ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾಗಬೇಕೆಂದು ಸರ್ಕಾರವು ಸ್ವಸಹಾಯ ಗುಂಪು, ಸ್ತ್ರೀಶಕ್ತಿ ಸಂಘಟನೆಯ ಗುಂಪುಗಳಿಗೆ ವಿವಿಧ ಯೋಜನೆಗಳ ಮೂಲಕ ಸೌಲಭ್ಯಗಳನ್ನು ನೀಡುತ್ತಿದೆ. ಮಹಿಳೆಯರು ಸೌಂದರ್ಯವರ್ಧಕ, ಅಲಂಕಾರಿಕ, ಔಷಧೀಯ, ಆಹಾರ ಮತ್ತು ಫಲಪುಷ್ಪಗಳ ಸಸ್ಯಗಳನ್ನು ಬೆಳೆದು ಉತ್ತಮ ಆದಾಯವನ್ನು ಪಡೆಯಬೇಕು.
ತುಂಗಭದ್ರ ನದಿಯಿಂದ ಉತ್ತಮ ನೀರಾವರಿ ವ್ಯವಸ್ಥೆಯನ್ನು ಹೊಂದಿದ್ದು ನರ್ಸರಿ ತರಬೇತಿಯನ್ನು ಪಡೆದ ಮಹಿಳೆಯರು ಸರ್ಕಾರ ನೀಡುವ ಸಹಾಯಧನವನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲೀಕರಣವಾಗಬೇಕೆಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಹೇಶ ಮಾತನಾಡಿ ರೈತರಿಗೆ ಸಸಿಗಳನ್ನು ಸರ್ಕಾರವು ನೀಡುತ್ತಿದ್ದು, ಇನ್ನೂ ಮುಂದೆ ಸ್ವಸಹಾಯ ಗುಂಪಿನ ಮಹಿಳೆಯರಿಗೆ ತರಬೇತಿ ನೀಡಿ ಅವರಿಗೆ ನರ್ಸರಿಯ ವಿವಿಧ ಸಸಿಗಳನ್ನು ನೀಡಲಾಗುತ್ತದೆ, ಇವುಗಳನ್ನು ಮಾರಾಟ ಮಾಡಿ ಆರ್ಥಿಕವಾಗಿ ಸದೃಡವಾಬೇಕೆಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನಬಸಪ್ಪ, ದೇಶನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಕುಂತಲಮ್ಮ ಗಂಗಾಧರ, ಪಿಡಿಒ ಹಾಗೂ ವಿವಿಧ ಸ್ವಸಹಾಯ ಗುಂಪುಗಳ ಮಹಿಳೆಯರು ಇದ್ದರು.