ನರ್ಮದಾ ಪರಿಕ್ರಮ ಮಾಡಿರುವುದು ಬಹುದೊಡ್ಡ ಸಾಧನೆ

ವಿಜಯಪುರ: ಮಾ.17:ಮೌಂಟ್ ಎವರೆಸ್ಟ್ ಏರುವುದು ಎಷ್ಟು ದೊಡ್ಡ ಸಾಧನೆಯೋ ಅದೇ ರೀತಿ ವಿಜಯಪುರದ ಬಸವರಾಜ ದೇವರ ತಮ್ಮ 68 ನೇ ವಯಸ್ಸಿನಲ್ಲಿ 52 ದಿನಗಳ ಕಾಲ 3800 ಕಿ.ಮೀ ಸೈಕಲ್ ತುಳಿದು, ನರ್ಮದಾ ಪರಿಕ್ರಮ ಮಾಡಿರುವುದು ಬಹುದೊಡ್ಡ ಸಾಧನೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಷಿ ಹೇಳಿದರು.

ಜ್ಞಾನಯೋಗಾಶ್ರಮದಲ್ಲಿಂದು ವಿಜಯಪುರ ಸೈಕ್ಲಿಂಗ್ ಗ್ರುಪ್ ಏರ್ಪಡಿಸಿದ ಬಸವರಾಜ ದೇವರ ಅವರ ನರ್ಮದಾ ಪರಿಕ್ರಮ ಕುರಿತ ಸಂವಾದ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿವೃತ್ತಿಯ ನಂತರ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವ ಬಸವರಾಜ ಅವರ ಸಾಧನೆ ಮೆಚ್ಚುವಂತದ್ದು. ಎಲ್ಲೆಡೆ ಈ ರೀತಿಯ ಸಾಧಕರ ಪರಿಚಯದಿಂದ ಉಳಿದವರಿಗೆ ಪ್ರೇರಣೆ ದೊರಕಲಿದೆ. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೆಲಸ ಮಾಡಲಿದೆ ಎಂದರು.

ವಿಸಿಜಿ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಮಾತನಾಡಿ, ನಮ್ಮ ನಿತ್ಯದ ದಿನಚರಿಯ ಕಂಪರ್ಟ್ ಜೋ???ನಿಂದ ಹೊರಗಡೆ ಬಂದಾಗ ಮಾತ್ರ ಜಗತ್ತು ಹೊಸದೃಷ್ಠಿಯಲ್ಲಿ ಅರಿಯಲು ಸಾಧ್ಯ. ಇಲ್ಲದಿದ್ದರೆ, ಟಾಂಗಾಗೆ ಜೋಡಿಸಿದ ಕುದರೆಯಂತೆ ನಿರ್ದಿಷ್ಟ ಮಾರ್ಗದಲ್ಲಿ ಜೀವನ ಸಾಗಿಸಿದಂತಾಗುತ್ತದೆ. ಸಿದ್ಧೇಶ್ವರ ಮಹಾಸ್ವಾಮಿಗಳವರು ಪಕೃತಿಯೊಂದಿಗೆ ಜೀವಿಸಲು ನಮಗೆ ಸದಾ ಹೇಳುತ್ತಿದ್ದರು. ಆ ನಿಟ್ಟಿನಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯರು ಹೆಜ್ಜೆ ಹಾಕುತ್ತಿದ್ದಾರೆ ಎಂದರು.

ನರ್ಮದಾ ಪರಿಕ್ರಮ ಕುರಿತು ಮಾತನಾಡಿದ ಬಸವರಾಜ ದೇವರ, ಏಕಾಂಗಿಯಾಗಿ ಸಂಚರಿಸುವುದು ಅದ್ಬುತ, ಅವರ್ಣೀಯ, ಇಲ್ಲಿ ನಮ್ಮೊಂದಿಗೆ ನಾವು ಮಾತನಾಡುತ್ತೇವೆ. ಇದು ಒಂದು ರೀತಿ ಆತ್ಮ ಪರಮಾತ್ಮದ ಸಂಯೋಗ. ಈ ಯಾತ್ರೆಯಾಗಿತ್ತು. ಯಾತ್ರೆ ಉದ್ದಕ್ಕೂ ನಾನು ಹಣಕೊಟ್ಟು ಊಟ, ತಿಂಡಿ ಮಾಡುವಂತಿಲ್ಲ. ಪಕೃತಿಯಲ್ಲಿ ದೊರೆತ ಹಣ್ಣು, ಹಂಪಲವನ್ನು ಸೇವಿಸುವಂತಿಲ್ಲ. ಕೇವಲ ಜನರು ನೀಡಿದ ಭಿಕ್ಷೆಯನ್ನು ಮಾತ್ರ ತಿಂದು, ಮುಂದೆ ಸಾಗಿದೆ. ಮತ್ತು ಹೆಚ್ಚು ನೀಡಿದರೆ, ಅದನ್ನು ತೆಗೆದುಕೊಂಡು ಹೋಗುವಂತಿಲ್ಲ. ಹೀಗೆ ಹಲವು ಕಠಿಣ ನಿಯಮಗಳು ನರ್ಮದಾ ನದಿ ಪರಿಕ್ರಮ ಯಾತ್ರೆಯಲ್ಲಿವೆ. ಅದನ್ನು ಸಂಪೂರ್ಣವಾಗಿ ಪಾಲಿಸಿದ ತೃಪ್ತಿ ನನಗೆ ಇದೆ ಎಂದರು.

ಜ್ಞಾನಯೋಗಾಶ್ರಮದ ಪೂಜ್ಯ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸನ್ಯಾಸಿಗಳು ಕೈಗೊಳ್ಳುವ ಈ ಕಠಿಣ ಯಾತ್ರೆಯನ್ನು ಸಂಸಾರಿಯಾಗಿ ಕೈಗೊಂಡು, ಯಶಸ್ವಿಯಾಗಿರುವ ಬಸವರಾಜ ದೇವರ ನಮ್ಮ ನಾಡಿನ ಯುವಕರಿಗೆ ಮಾದರಿ. ಇದನ್ನು ಅನುಸರಿಸಿ, ಇನ್ನು ಹೆಚ್ಚು ಯುವಕರು ಇಂತಹ ಸಾಹಸಮಯ ಆಧ್ಯಾತ್ಮ ಯಾತ್ರೆಯಲ್ಲಿ ಪಾಲ್ಗೊಳ್ಳಲಿ ಎಂದರು.

ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಕಾರ್ಯದರ್ಶಿ ಸೋಮಶೇಖರ ಸ್ವಾಮಿ, ಸದಸ್ಯರಾದ ಡಾ.ಶಂಕರಗೌಡ ಪಾಟೀಲ ಕನಮಡಿ, ಸಂಕೇತ ಬಗಲಿ, ಪೆÇ??.ಕವಲಗಿ, ಉದ್ಯಮಿದಾರ ಭೀಮಶಿ ಬಿರಾದಾರ, ಶಿವರಾಜ ಪಾಟೀಲ, ಸೋಮು ಮಠ, ಮುತ್ತಣ್ಣ ಬಿರಾದಾರ, ರಾಕ್ ಶ್ರೀಕಾಂತ ಸೇರಿದಂತೆ ನೂರಾರು ಯುವ ಸೈಕ್ಲಿಸ್ಟ್‍ಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.