ನರೋಣಾ ಕ್ಷೇಮಲಿಂಗೇಶ್ವರ ಜಾತ್ರಾ ಮಹೋತ್ಸವ

ಆಳಂದ,ಮೇ.14-ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದ ಆಳಂದ ತಾಲ್ಲೂಕಿನ ಸುಕ್ಷೇತ್ರ ನರೋಣಾದ ಕ್ಷೇಮಲಿಂಗೇಶ್ವರ ಜಾತ್ರಾ ಮಹೋತ್ಸವ ಮೇ.16 ರಂದು ಬುದ್ಧ ಪೂರ್ಣಿಮೆಯ ದಿನ ಅದ್ದೂರಿಯಾಗಿ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಮೇ.15 ರಂದು ಸಾಯಂಕಾಲ 6 ಗಂಟೆಗೆ ಉಚ್ಚಾಯಿ ನೆರವೇರುವುದು.
ಮುತ್ತ್ಯಾನ ಬಬಲಾದ ವಿರಕ್ತ ಮಠದ ಗುರುಪಾದಲಿಂಗ ಮಹಾಶಿವಯೋಗಿಗಳು, ಹಾರಕೂಡ ಸಂಸ್ಥಾನಮಠದ ಡಾ.ಚನ್ನವೀರ ಶಿವಾಚಾರ್ಯರು, ನರೋಣಾ ಮಹಾಂತೇಶ್ವರ ಮಠದ ಡಾ.ಗುರುಮಹಾಂತ ಸ್ವಾಮಿಗಳು ಮತ್ತು ನರೋಣಾ ಹೊಸಮಠದ ಚನ್ನಮಲ್ಲ ದೇವರು ಮೇ.16 ರಂದು ಸಾಯಂಕಾಲ 7.05 ನಿಮಿಷಕ್ಕೆ ರಥೋತ್ಸವಕ್ಕೆ ಚಾಲನೆ ನೀಡುವರು.
ಇದಕ್ಕೂ ಮುನ್ನ ಅಂದು ಸಾಯಂಕಾಲ 5 ಗಂಟೆಗೆ ಮಹಾಂತೇಶ್ವರ ಮಠದಿಂದ ಪಲ್ಲಕ್ಕಿ ಮೆರವಣಿಗೆ ಶ್ರೀಕ್ಷೇತ್ರಕ್ಕೆ ಹೊರಡುವುದು. ನಂತರ ರಥೋತ್ಸವ ಮತ್ತು ಮದ್ದು ಸುಡುವ ಕಾರ್ಯಕ್ರಮ ನಡೆಯುವುದು. ಮೇ.17 ರಂದು ಸಾಯಂಕಾಲ 4 ಗಂಟೆಗೆ ಜಂಗಿ ಪೈಲ್ವಾನರಿಂದ ಕುಸ್ತಿ ನಡೆಯುವುದು. 18 ರಂದು ಸಾಯಂಕಾಲ 4 ಗಂಟೆಗೆ ಪಲ್ಲಕ್ಕಿ ಮೆರವಣಿಗೆಯು ಶ್ರೀಕ್ಷೇತ್ರದಿಂದ ಹೊರಟು ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಮಹಾಂತೇಶ್ವರ ಮಠಕ್ಕೆ ತಲುಪುವುದು ಎಂದು ವೇದಮೂರ್ತಿ ಗುರುಲಿಂಗಯ್ಯ ಅವರು ಗ್ರಾಮದ ಸಮಸ್ತ ಸದ್ಭಕ್ತ ಮಂಡಳಿ ಪರವಾಗಿ ತಿಳಿಸಿದ್ದಾರೆ.