ನರೇಗಾ ವೇತನ ಪಾವತಿ ವಿಳಂಬ: ಧರಣಿಗೆ ಕೂಲಿ ಕಾರ್ಮಿಕರ ನಿರ್ಧಾರ

ಸಿರವಾರ.ಅ.೧೯- ತಾಲೂಕಿನ ಹೀರಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವೇತನ ನೀಡದೆ ಕಳೆದ ೫ ತಿಂಗಳುಗಳಿಂದ ಕಾಲಹರಣ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಗ್ರಾಮ ಪಂಚಾಯತಿ ಮುಂದೆ ಧರಣಿ ಹೂಡಲಾಗುವುದು ಎಂದು ಕೂಲಿ ಕಾರ್ಮಿಕರು ಎಚ್ಚರಿಸಿದ್ದಾರೆ.
ನರೇಗಾ ಯೋಜನೆಯ ಅಡಿಯಲ್ಲಿ ಮೇ ತಿಂಗಳಿನಲ್ಲಿ ನಡೆದ ಗ್ರಾಮದ ಹಳ್ಳದ ಅಭಿವೃದ್ಧಿ ಕಾಮಗಾರಿಯ ೧೫೦ ಕಾರ್ಮಿಕರ ೭ ದಿನದ ಸುಮಾರು ೩ ಲಕ್ಷಕ್ಕೂ ಅಧಿಕ ವೇತನ ಪಾವತಿಸದೇ ಜೆ.ಇ ಮತ್ತು ಪಿಡಿಒ ಅವರು ಒಬ್ಬರ ಮೇಲೆ ಒಬ್ಬರು ಕುಂಟು ನೆಪ ಹೇಳುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ತಾಲೂಕು ಪಂಚಾಯತಿ ಇಒ ಮತ್ತು ಜಿಲ್ಲಾ ಪಂಚಾಯತ ಸಿಇಒ ಅವರಿಗೆ ಲಿಖಿತವಾಗಿ ಗಮನಕ್ಕೆ ತಂದು ೧೫ ದಿನಗಳು ಕಳೆದರೂ ಯಾವುದೇ ಬೆಳವಣಿಗೆ ಇಲ್ಲದೆ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ. ಬರ ಪರಿಸ್ಥಿತಿ ಆವರಿಸಿದ್ದು, ಬಡ ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಅಧಿಕಾರಿಗಳ ಮೇಲೆ ಸಂಬಂಧಿಸಿದ ಮೇಲಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಮತ್ತು ಶೀಘ್ರವಾಗಿ ಕೂಲಿಕಾರರಿಗೆ ವೇತನ ನೀಡಬೇಕು. ನಿರ್ಲಕ್ಷ್ಯ ವಹಿಸಿದರೆ ನೂರಾರು ಕಾರ್ಮಿಕರೊಂದಿಗೆ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಧರಣಿ ಹೂಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕೂಲಿ ಕಾರ್ಮಿಕರಾದ ಕೆಂಚಣ್ಣ ಯಾದವ್, ಅಶೋಕ ಉಪ್ಪಾರ,ತಿಮ್ಮಾರೆಡ್ಡಿ , ಲಾಲು, ಆನಂದಮ್ಮ, ಶರಣಮ್ಮ, ಕಲ್ಲಮ್ಮ, ಹುಚ್ಚಮ್ಮ ಸೇರಿದಂತೆ ಇತರರು ಇದ್ದರು.