ನರೇಗಾ ಯೋಜನೆ: ಸರ್ಕಾರಿ ಶಾಲೆಗಳಿಗೆ ಜೀವಕಳೆ

ಭೋಜನಾಲಯ ಕಟ್ಟಡದಲ್ಲಿ ಮಕ್ಕಳು ಒಂದೆಡೆ ಕುಳಿತು ಊಟ ಮಾಡುವುದು
ಹನುಮೇಶ ಛಲವಾದಿ.
ಸಿರವಾರ.ಸೆ.೧೦-ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿಯಲ್ಲಿ ಸಿರವಾರ ತಾಲೂಕಿನ ವಿವಿಧ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಸಜ್ಜಿತ ಶಾಲಾ ಭೋಜನಾಲಯ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಗೋಡೆಗಳ ಮೇಲೆ ವಿವಿಧ ಮಾಹಿತಿ ನೀಡುವ ಚಿತ್ರಗಳನ್ನು ಬಿಡಿಸುವ ಮೂಲಕ ಸರ್ಕಾರವು ಕಾರ್ಮಿಕರಿಗೆ ಕೆಲಸ ನೀಡುವ ಜೊತೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯತ ನರೇಗಾ ಯೋಜನೆಯಡಿಯಲ್ಲಿ ಸುಸಜ್ಜಿತ ಶಾಲಾ ಭೋಜನಾಲಯ ಕಟ್ಟಡ ನಿರ್ಮಾಣ ಮಾಡಿ ಮಕ್ಕಳು ಒಂದೆಡೆ ಕುಳಿತು ಊಟ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.
ಸಿರವಾರ ತಾಲೂಕಿನ ೧೪ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಈಗಾಗಲೇ ೮ ಗ್ರಾಮ ಪಂಚಾಯತಿಗಳ ಸರ್ಕಾರಿ ಪ್ರೌಢಶಾಲೆಯಲ್ಲಿ ಭೋಜನಾಲಯ ಕಟ್ಟಡ ನಿರ್ಮಾಣ ಮಾಡುವ ಗುರಿ ಇದೆ. ಮಲ್ಲಟ ಗ್ರಾಮ ಪಂಚಾಯತಿಯ ಕುರುಕುಂದಾ ಗ್ರಾಮದಲ್ಲಿ ೨೦೨೧-೨೨ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆ, ಹೀರಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಭೋಜನಾಲಯ ಕಟ್ಟಡ ನಿರ್ಮಾಣ ಮಾಡಲಾಗಿದೆ.
ನವಲಕಲ್, ಬಾಗಲವಾಡ ಮತ್ತು ಮಲ್ಲಟ ಗ್ರಾಮದಲ್ಲಿ ಶಾಲಾ ಭೋಜನಾಲಯ ಕಟ್ಟಡ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ.
ಗೋಡೆಗಳಲ್ಲಿ ಮಾಹಿತಿ: ೧೨.೫೦ ಲಕ್ಚ ವೆಚ್ಚದಲ್ಲಿ ಪ್ರತಿ ಶಾಲಾ ಭೋಜನಾಲಯ ಕಟ್ಟಡ ನಿರ್ಮಾಣ ಜೊತೆಗೆ ಗೋಡೆಗಳ ಮೇಲೆ ಮಕ್ಕಳು ಸೇವಿಸಬಹುದಾದ ಪೌಷ್ಠಿಕ ಆಹಾರ ಕಿಟ್, ಸಮತೋಲಿತ ಆಹಾರ, ಆರೋಗ್ಯಕರ ಹವ್ಯಾಸಗಳು, ಪ್ರತಿ ದಿನ ಸೇವಿಸಬೇಕಾದ ಆಹಾರ ಪದಾರ್ಥ, ವಿಟಮಿನ್ಗಳ ಮಾಹಿತಿ, ಗೌತಮ ಬುದ್ಧನ ಭಾವಚಿತ್ರ, ಎತ್ತಿನ ಗಾಡಿಯಲ್ಲಿ ಸವಾರಿ ಸೇರಿ ವಿದ್ಯಾರ್ಥಿಗಳ ಪಠ್ಯಕ್ರಮಕ್ಕೆ ಪೂರಕವಾದ ಚಿತ್ರಗಳಿವೆ. ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವ ಚಿತ್ರಗಳು ಇವೆ.
ಕಲ್ಯಾಣ ಮಂಟಪ ಮಾದರಿಯಲ್ಲಿ ನಿರ್ಮಿಸಿರುವ ಭವ್ಯ ಭೋಜನಾಲಯ ಕಟ್ಟಡ ಶಾಲೆಯ ಎಲ್ಲಾ ಮಕ್ಕಳೂ ಒಂದಡೆ ಕುಳಿತುಕೊಳ್ಳವಷ್ಟು ವಿಸ್ತಾರವಾಗಿದೆ. ಮಕ್ಕಳು ಮಧ್ಯಾಹ್ನದ ಬಿಸಿ ಊಟಕ್ಕಾಗಿ ಬಯಲಿನಲ್ಲಿಯೇ ಕುಳಿತುಕೊಳ್ಳವಂತಾಗಿತ್ತು. ಇದನ್ನು ಮನಗಂಡ ಆಯಾ ಗ್ರಾಮ ಪಂಚಾಯತಿ ಪಿಡಿಓ ಮತ್ತು ಅಧಿಕಾರಿ ವರ್ಗದವರು ಸುಸಜ್ಜಿತ ಭೋಜನಾಲಯ ಕಟ್ಟಡ ನಿರ್ಮಾಣ ಮಾಡುವ ಮೂಲಕ ಸಾಕಾರಗೊಂಡಿದೆ.
ಗ್ರಾಮೀಣ ಭಾಗದಲ್ಲಿನ ಸರಕಾರಿ ಶಾಲೆಗಳು, ಅಡುಗೆ ಕೋಣೆಗಳ ದುಸ್ಥಿತಿ ನೋಡಿ ಮೂಗು ಮುರಿಯುವವರೇ ಹೆಚ್ಚು, ಆದರೆ ಸಿರವಾರ ತಾಲೂಕಿನಲ್ಲಿ ಇದೀಗ ಸರಕಾರಿ ಶಾಲೆಗಲ್ಲಿನ ಭೋಜನಾಲಯಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ನರೇಗಾ ಯೋಜನೆಯಡಿಯಲ್ಲಿ ಸುಸಜ್ಜಿತವಾದ ಭೋಜನಾಲಯ ಕಟ್ಟಡ ನಿರ್ಮಾಣಗೊಂಡಿದೆ.
ಮಕ್ಕಳು ಊಟಕ್ಕೆ ಕುಳಿತುಕೊಳ್ಳಲು ಸುಸಜ್ಜಿತ ಡೈನಿಂಗ್ ಕಟ್ಟೆ ಮಾಡಲಾಗಿದೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಸುಸಜ್ಜಿತ ಭೋಜನಾಲಯ ಕಟ್ಟಡ ನಿರ್ಮಾಣ ಮಾಡಿರುವುದು ನೋಡುಗರ ಗಮನ ಸೆಳೆಯುತ್ತಿದೆ.