ನರೇಗಾ ಯೋಜನೆ ಕಾಮಗಾರಿಗಳ ಸ್ಥಳ ಹಾಗೂ ದಾಖಲೆ ಪರಿಶೀಲನೆ

ದೇವದುರ್ಗ,ಮಾ.೧೪- ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ೨೦೨೨-೨೩ ನೇ ಸಾಲಿನಲ್ಲಿ ನರೇಗಾ ಯೋಜನೆ ಅಡಿ ಕೈಗೆತ್ತಿಕೊಂಡ ೨೦೦ಕ್ಕೂ ಹೆಚ್ಚು ವಿವಿಧ ಕಾಮಗಾರಿಗಳ ಸ್ಥಳ ಹಾಗೂ ದಾಖಲೆ ಪರಿಶೀಲನೆಗಾಗಿ ರಾಜ್ಯ ಗುಣ ನಿಯಂತ್ರಣ ಮಾನಿಟರ್ ಬಿ.ಅಗ್ನಾಳ ನೇತೃತ್ವದ ತನಿಖಾ ತಂಡ ಕಚೇರಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದರು.
ನಂತರ ಅವರು ಮಾತನಾಡಿ, ಸ್ಥಳೀಯ ವಕೀಲರಾದ ರಾಜಾ ವಾಸುದೇವ ನಾಯಕ ಅವರು ನರೇಗಾ ಯೋಜನೆ ಕೈಗೆತ್ತಿಕೊಂಡ ಕಾಮಗಾರಿಗಳಲ್ಲಿ ಅವ್ಯವಹಾರ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಗಳಿಗೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಕ್ರಿಯಾ ಯೋಜನೆ ಪ್ರತಿ, ಕೆಲಸ ಬಯಸಿ ಅರ್ಜಿ ಸಲ್ಲಿಸಿದ ಕಾರ್ಮಿಕ ಪಾರಂ ನಂಬರ್ ೬ ಪ್ರತಿ, ಕಾಮಗಾರಿ ನಿರ್ವಹಣೆ ಮಾಡಿದ ಸ್ಥಳ ಪರಿಶೀಲನೆ ಮಾಡಿ ನಂತರ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ದೂರುದಾರ ರಾಜಾವಾಸುದೇವ ನಾಯಕ ಅವರು ಮಾತನಾಡಿ, ನರೇಗಾ ಯೋಜನೆ ಅಡಿ ಪ್ರಮುಖ ವಾಗಿ ಕೆಲಸ ಮಾಡದೇ ವಿವಿಧ ನಗರ ಗಳಲ್ಲಿ ವಿದ್ಯಾಬ್ಯಾಸ ಮಾಡುವಂತಹ ಕೂಲಿ ಕಾರ್ಮಿಕರು ಎಂದು ಹಣ ಸಂದಾಯ ಮಾಡಲಾಗಿದೆ.
ರೈತರ ಜಮೀನುಗಳಲ್ಲಿ ಕೃಷಿ ಹೊಂಡ, ಬದು ನಿರ್ಮಾಣ, ಜಾನುವಾರಗಳ ಶೇಡ್ ಸೇರಿದಂತೆ ಕೆಲಸ ಮಾಡದೇ ಇದ್ದರೂ ಹಣ ಪಾವತಿಸಲಾಗಿದೆ. ಅಲ್ಲದೇ ಕೆಲವು ಕೃಷಿ ಜಮೀನುಗಳ ಮೇಲೆ ನ್ಯಾಯಾಲಯದಲ್ಲಿ ವ್ಯಜ್ಯ ಹಾಗೂ ತಡೆಯಾಜ್ಞೆ ಇದ್ದರು ಸಹ, ಕಾಮಗಾರಿಗಳನ್ನು ಮಾಡಲಾಗಿದೆ. ಕೆಲವರ ಹೆಸರಲ್ಲಿ ಜಮೀನು ಇಲ್ಲ. ಅದರೂ ಸಹ ಯೋಜನೆ ಅಡಿ ಫಲಾನುಭವಿಯಾಗಿದ್ದು, ಹಣ ಕೂಡ ಪಾವತಿಸಲಾಗಿದೆ ಎಂದು ಅವರು ಆರೋಪಿಸಿದ್ದರು.
ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ನಿಷ್ಪಕ್ಷಪಾತ ವಾಗಿ ತನಿಖೆ ಕೈಗೊಂಡು ವರದಿ ಸಲ್ಲಿಸಬೇಕು. ಈಗಾಗಲೇ ತಮ್ಮ ಎಲ್ಲಾ ಆರೋಪಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಸಂಗ್ರಹಿಸಿಕೊಂಡಿದ್ದು, ಸೂಕ್ತ ತನಿಖೆ ಮಾಡಿ ಕ್ರಮ ಜರುಗಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಕೇಂದ್ರ ತಂಡ ಜಾಲಹಳ್ಳಿ ಗ್ರಾ.ಪಂ ತನಿಖೆ ಕೈಗೊಳ್ಳಲು ಪತ್ರ ಬರೆಯಲಾಗುವುದು.
ಅಗತ್ಯ ಬಿದ್ದರೆ ನ್ಯಾಯಲಯದ ಎಲ್ಲಾ ದಾಖಲೆಗಳನ್ನು ನೀಡಿ ವೈಯಕ್ತಿ ದಾವೆ ಹೋಡುವುದಾಗಿ ತಿಳಿಸಿದರು. ಕಳೆದ ಎರಡು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ಗ್ರಾ.ಪಂ ಯನ್ನು ಮೇಲ್ದರ್ಜೆಗೆ ಏರಿಸಿ ಆದೇಶ ಮಾಡಲಾಗಿತ್ತು.
ಅದರೆ, ಸ್ಥಳೀಯವಾಗಿ ಕೂಲಿ ಕಾರ್ಮಿಕರ ಸಂಖ್ಯೆಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿ ಮರಳಿ ಗ್ರಾ.ಪಂ ಯಾಗಿ ಮಾಡಿಕೊಂಡು ಜನತೆಗೆ ಕೆಲಸ ನೀಡದೇ, ಕಾಮಗಾರಿ ಮಾಡದೇ ಹಣ ಲಪಾಟಸುವ ವ್ಯವಸ್ಥಿತ ದಂಧೆ ನಡೆಸಲಾಗುತ್ತಿದೆ. ಅದ್ದರಿಂದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೂಕ್ತ ರೀತಿಯಿಂದ ತನಿಖೆ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಿಡಿಓ ಪತ್ಯಾಪ್ಪ ರಾಠೋಡ್, ಬಸವರಾಜ ನಾಯಕ, ಅಶೋಕ್, ಯಂಕೋಬ ಪಲಕನಮರಡಿ ಸೇರಿದಂತೆ ಅನೇಕರು ಇದ್ದರು.