ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆ ಸಭೆ

ಹನೂರು: ನ.17:- ಕಳೆದ 6 ತಿಂಗಳ ಅವಧಿಯಲ್ಲಿ ನರೇಗಾ ಯೋಜನೆಯಡಿ ದೊಡ್ಡಲತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 146 ಕಾಮಗಾರಿಗಳು ನಡೆದಿದ್ದು, 60.26 ಲಕ್ಷ ರೂ ಅನುದಾನ ಖರ್ಚು ಮಾಡಲಾಗಿದೆ ಎಂದು ತಾಲೂಕು ನರೇಗಾ ಸಂಯೋಜಕ ನಾರಾಯಣ್ ತಿಳಿಸಿದರು.
ದೊಡ್ಡಲತ್ತೂರು ಗ್ರಾಪಂ ವತಿಯಿಂದ ಮಂಗಳವಾರ ಕಚೇರಿ ಆವರಣದಲ್ಲಿ ಆಯೋಜಿಸಿದ್ಧ 2021-22ನೇ ಸಾಲಿನ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆ ಸಭೆಯಲ್ಲಿ ಅವರು ಮಾತನಾಡಿದರು.
ನರೇಗಾ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಇದರಲ್ಲಿ ಪ್ರತಿ ಕುಟುಂಬವೂ ಉದ್ಯೋಗ ಪಡೆಯುವುದರ ಮೂಲಕ ಕೂಲಿ ಪಡೆಯಬಹುದಾಗಿದೆ. ಈ ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣ, ದನದ ಕೊಟ್ಟಿಗೆ, ಜಮೀನು ರಸ್ತೆ ಅಭಿವೃದ್ಧಿ ಸೇರಿದಂತೆ ಸಮುದಾಯದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ.
ಆದ್ದರಿಂದ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳವುದರ ಮೂಲಕ ಗ್ರಾಮದ ಅಭಿವೃದ್ಧಿಗೆ ಗ್ರಾಪಂಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ಯೋಜನೆಯಡಿ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ ವಸತಿ ಯೋಜನೆಗೆ ಅನುದಾನ, ದನದ ಕೊಟ್ಟಿಗೆ, ಸಿಸಿ ರಸ್ತೆ, ಚರಂಡಿ ನಿರ್ಮಾಣ, ಜಮೀನು, ಕೆರೆ ಅಭಿವೃದ್ಧಿ, ಸಸಿ ನೆಡುವಿಕೆ, ಕೃಷಿ ಹೊಂಡ, ಚೆಕ್‍ಡ್ಯಾಂ ಹೂಳು ತೆಗೆಸುವಿಕೆ, ಜಮೀನುಗಳ ರಸ್ತೆ ಅಭಿವೃದ್ಧಿ, ಬದು ನಿರ್ಮಾಣ, ಮೆಟ್ಲಿಂಗ್ ರಸ್ತೆ ಕಾಮಗಾರಿ, ಇಂಗುಗುಂಡಿ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಕೂಲಿ ವೆಚ್ಚ 45,50,913 ರೂ ಹಾಗೂ ಸಾಮಾಗ್ರಿ ವೆಚ್ಚ 14,75,908 ರೂಗಳು ಸೇರಿದಂತೆ 60,26,821 ರೂ ಅನುದಾನ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಕಳೆದ ಗ್ರಾಪಂ ವ್ಯಾಪ್ತಿಯಲ್ಲಿ 6 ತಿಂಗಳಲ್ಲಿ ಕೈಗೊಳ್ಳಲಾಗಿದ್ದ ಅಭಿವೃದ್ಧಿ ಕಾಮಗಾರಿಗಳ ವಿವರಗಳನ್ನು ಸಭೆಯೆಲ್ಲಿ ಮಂಡಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಬಸಮ್ಮ, ಸದಸ್ಯರಾದ ರವಿ, ಗೌರಿಶಂಕರ, ರಂಗಸ್ವಾಮಿ, ಕುಮಾರ್, ಚಿನ್ನಪೆÇನ್ನಿ, ನೋಡೆಲ್ ಅಧಿಕಾರಿ ಶಿವಲೀಲಾ, ಕೃಷಿ ಇಲಾಖೆಯ ಪ್ರತಿಮಾ ಹಾಗೂ ಗ್ರಾಮಸ್ಥರು ಇದ್ದರು.