ನರೇಗಾ : ಮಹಿಳಾ ಸ್ವ- ಸಹಾಯ ಗುಂಪುಗಳಿಗೆ ಕಾರ್ಯಾಗಾರ

ರಾಯಚೂರು,ಡಿ.೦೧- ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೆಲಸಕ್ಕಾಗಿ ಬೇರೆ ಜಿಲ್ಲೆಗಳಿಗೆ ಗುಳೆ ಹೋಗುವುದನ್ನು ತಡೆದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಆಯಾ ಗ್ರಾಮಗಳಲ್ಲಿಯೇ ಕೆಲಸ ಮಾಡಿಕೊಂಡು ಕುಟುಂಬವನ್ನು ಪೋಷಣೆ ಮಾಡಲು ಸಹಕಾರಿಯಾಗಲಿದೆ ಎಂದು ರಾಯಚೂರು ತಾಲ್ಲೂಕ ಪಂಚಾಯತಿ ಐಇಸಿ ಸಂಯೋಜಕರಾದ ಧನರಾಜ ತಿಳಿಸಿದರು.
ಅವರು ಬುಧವಾರ ತಾಲೂಕಿನ ದೇವಸೂಗುರು ಗ್ರಾಮ ಪಂಚಾಯತಿ ವ್ಯಾಪ್ತಿಯ ಜನತಾ ಕಾಲೋನಿಯ ಸಮುದಾಯ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ರಾಯಚೂರು ಸಂಯುಕ್ತಾಶ್ರಯದಲ್ಲಿ ೭೫ನೇ ವರ್ಷದ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಗುಂಪುಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಿದರು.
ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಹೊಂದಲು ನರೇಗಾ ಪೂರಕ ವಾತವಾರಣವಿದ್ದು, ಸದುಪಯೋಗ ಪಡೆದುಕೊಳ್ಳಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ವೈಯಕ್ತಿಕವಾಗಿ ಕೃಷಿ ಹೊಂಡ, ಬದು ನಿರ್ಮಾಣ, ದನದದೊಡ್ಡಿ, ಕುರಿದೊಡ್ಡಿ, ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ, ಮಲ್ಲಿಗೆ, ಗುಲಾಬಿ ಹೂ, ಕರಿಬೇವು, ಪಪ್ಪಾಯಿ, ಪೆರಲ, ಮೊಸಂಬಿ, ನುಗ್ಗೆ ಎಲೆ ತೋಟ, ಸೇರಿದಂತೆ ಇನ್ನಿತರ ವಿವಿಧ ಕಾಮಗಾರಿಗಳ ಸದುಪಯೋಗ ಪಡೆದುಕೊಂಡು ವೈಯಕ್ತಿಕವಾಗಿ ಅಭಿವೃದ್ಧಿ ಹೊಂದಲು ನರೇಗಾ ಯೋಜನೆಯಡಿಯಲ್ಲಿ ಉತ್ತಮ ಅವಕಾಶಗಳಿವೆ ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಒಂದು ದಿನಕ್ಕೆ ೨೮೯ ರೂ ಕೂಲಿ ಹಾಗೂ ಸಲಕರಣೆ ವೆಚ್ಚ ೧೦ ರೂ ನೀಡಲಾಗುತ್ತಿದೆ. ಅಲ್ಲದೇ ಪ್ರತಿ ಕುಟುಂಬಕ್ಕೆ ೧೦೦ ದಿನಗಳ ಕಾಲ ಕೂಲಿ ಕೆಲಸ ಮಾಡಬಹುದಾಗಿದೆ. ಕರೋನಾ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಸಾಕಷ್ಟು ಜನರಿಗೆ ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕೆಲಸ ಸಿಕ್ಕಿದೆ.
ಸರ್ಕಾರದಿಂದ ನೀಡಿರುವ ಮನೆಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ೯೦ ಮಾನವ ದಿನಗಳ ಕೂಲಿ ಹಣವನ್ನು ಹಂತಹಂತವಾಗಿ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ನರೇಗಾ ಯೋಜನೆಯಡಿ ಕೆಲಸಕ್ಕಾಗಿ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಬೇಕು. ಜಾಬ್ ಕಾರ್ಡ್ ಗೆ ಬೇಡಿಕೆ ಸಲ್ಲಿಸುವ ವಿಧಾನ: ಕಾಯಕ ಮಿತ್ರ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಂಡು ಸಲ್ಲಿಸಬಹುದು ಅಥವಾ ಆನ್ ಲೈನ್ ಮೂಲಕ ಸಲ್ಲಿಸಬಹುದು ಮತ್ತು ಉಚಿತ ಸಹಾಯವಾಣಿ ೧೮೦೦೪೨೫೮೬೬೬ ಮೂಲಕ ಬೇಡಿಕೆ ಸಲ್ಲಿಸಬಹುದು ಎಂದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ವಿಶೇಷ ವರ್ಗಗಳಿಗೆ ವಿಶೇಷ ಅವಕಾಶ:
ವಿಶೇಷ ಚೇತನರಿಗೆ ಪ್ರತ್ಯೇಕ ಉದ್ಯೋಗ ಚೀಟಿ ನೀಡುವುದು, ಆದಿ ಕಾಲದ ಬುಡಕಟ್ಟು ಜನಾಂಗ, ಅಲೆಮಾರಿ ಬುಡಕಟ್ಟು ಜನಾಂಗ, ಸಮಾನ ಕೆಲಸಕ್ಕೆ ಸಮಾನ ಕೂಲಿ, ವಿಶೇಷ ವರ್ಗಗಳಿಗೆ ಹಸಿರು ಬಣ್ಣದ ಜಾಬ್ ಕಾರ್ಡ್ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿ.ಐ.ಎಸ್ ಜಗದೀಶ್ ಹಾಗೂ ಎನ್.ಆರ್.ಎಲ್.ಎಮ್ ಬಸವರಾಜ ಪಾಟೀಲ್, ಲೋಕೇಶ್ ಸೇರಿದಂತೆ ಇತರರು ಇದ್ದರು.