ನರೇಗಾ ಗ್ರಾಮೀಣ ಜನರ ಆಶಾಕಿರಣ

ವಾಡಿ: ಏ.26: ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಭಾಗದ ಜನರ ಆಶಾಕಿರಣವಾಗಿದೆ. ಕೂಲಿ ಆಧರಿಸಿ ದೂರದ ಬೆಂಗಳೂರು, ಮುಂಬೈ, ಪುಣೆ, ಹೈದ್ರಾಬಾದ ನಗರ ಪ್ರದೇಶಗಳಿಗೆ ಕಲಬರುಗಿ ಕಾರ್ಮಿಕರು ದುಡಿಯಲು ಹೋಗೋದು ಸಹಜವಾಗಿದೆ. ಆದರೆ ಗ್ರಾಮದಲ್ಲಿಯೇ ಕೆಲಸ ನೀಡುತ್ತಿರುವುದು ಖುಷಿಯ ವಿಚಾರವಾಗಿದೆ.

ಪಟ್ಟಣ ಸಮೀಪದ ಕಮರವಾಡಿ ಗ್ರಾಪಂ ಆಡಳಿತ ನೂರಾರು ಕಾರ್ಮಿಕರಿಗೆ ಉದ್ಯೋಗ ಖಾತ್ರಿಯಲ್ಲಿ ಕೆಲಸ ನೀಡುವದರ ಮೂಲಕ ನರೇಗಾ ಯೋಜನೆಯ ಸದ್ಬಳಕೆ ಮಾಡಿಕೊಳ್ಳುತ್ತಿದೆ. ಈ ವೇಳೆ ಮಾತನಾಡಿದ ಕಾರ್ಮಿಕ ಮಹಿಳೆ ಮಮತಾ ಕುಸನೂರ, ಸ್ಥಳೀಯ ಗ್ರಾಪಂ ಆಡಳಿತ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೂರಾರು ಜನರಿಗೆ ದುಡಿಯಲು ಕೆಲಸ ನೀಡಿದೆ. ಉದ್ಯೋಗಕ್ಕಾಗಿ ನಾವುಗಳು ನಗರ ಪ್ರದೇಶಗಳಿಗೆ ತೆರಳಿಬೇಕಾದ ಅನಿವಾರ್ಯತೆ ನಮಗೆ ಕಾಡುತ್ತಿತ್ತು. ಸದ್ಯ ನರೇಗಾ ಯೋಜನೆಯಲ್ಲಿ ಉದ್ಯೋಗ ದೊರಕಿದ್ದು ಖುಷಿ ನೀಡಿದೆ ಎಂದರು.

ಕೂಲಿ ಕಾರ್ಮಿಕರ ಸಹಾಯಕ ರವಿ ಗುತ್ತೇದಾರ ಮಾತನಾಡಿ, ಕಮರವಾಡಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ನೂರಾರು ಕಾರ್ಮಿಕರಿಗೆ ನರೇಗಾ ಯೋಜನೆಯಲ್ಲಿ ಉದ್ಯೋಗ ಕಲ್ಪಿಸಲಾಗಿದೆ. ಈ ಯೋಜನೆ ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನರೇಗಾ ಮಾರ್ಗ ಸೂಚಿಗಳ ಪ್ರಕಾರ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿದ್ದೇವೆ. ಕಾರ್ಮಿಕರು ಇದರ ಸದ್ಬಳಕೆ ಮಾಡಿಕೊಳ್ಳವದರ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಯಕ ಬಂದುಗಳಾದ ನಾಗರತ್ನ ಶಿರವಾಳ, ಸಿದ್ದಮ್ಮ ಪೂಜಾರಿ, ಚಂದ್ರಶೇಖರ ಅಮಕಾರ, ಮುಖಂಡ ಹರಿ ಚವ್ಹಾಣ ಸೇರಿದಂತೆ ಕಾರ್ಮಿಕ ಮಹಿಳೆಯರಿದ್ದರು.