ನರೇಗಾ ಕೂಲಿ ಕಾರ್ಮಿಕರೊಂದಿಗೆ ಅಂಬೇಡ್ಕರ್ ಜಯಂತಿ ಆಚರಣೆ


ರೋಣ,ಏ.15: ಸಂವಿಧಾನ ಶಿಲ್ಪಿ’ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಡೆದ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಯಿತು.
ರೋಣ ತಾಲೂಕಿನ ಹೊಳೆ ಮಣ್ಣೂರ ಹಾಗೂ ಹೊಳೆ ಆಲೂರು ಗ್ರಾಮದ ನರೇಗಾ ಕಾಮಗಾರಿ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಪೂಜೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೊಳೆ ಮಣ್ಣೂರು ಹಾಗೂ ಹೊಳೆ ಆಲೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವನಗೌಡ ಮೆಣಸಗಿ ಭಾರತ ಕಂಡ ಶ್ರೇಷ್ಠ ಮಹಾ ನಾಯಕರಲ್ಲಿ ಒಬ್ಬರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಶ್ರಮಿಕ ವರ್ಗವಾದ ತಮ್ಮೆಲ್ಲರ ಜೊತೆಗೆ ಮಾಡುತ್ತಿರುವದು ನಮ್ಮ ನಿಮ್ಮೇಲ್ಲರ ಪುಣ್ಯ. “ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್” ನಮ್ಮ ಭಾರತೀಯರಿಗೆ ಮೂರು ಮುಖ್ಯ ತತ್ವ ಗಳು ಅವರು ನೀಡಿದ್ದಾರೆ, ಅದುವೇ “ಶಿಕ್ಷಣ,ಸಂಘಟನೆ,ಹೋರಾಟ” ಈ ತತ್ವಗಳ ದಿಸೆಯಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬೇಕು.
ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ . ದೇಶದ ಸಾಮಾನ್ಯ ಹಾಗೂ ಕಟ್ಟ ಕಡೆಯ ಮನುಷ್ಯನಿಗೆ ಎಲ್ಲಾ ಮೂಲಭೂತ ಹಕ್ಕುಗಳನ್ನು ದಯಪಾಲಿಸಿದ್ದು ಭಾರತದ ಶ್ರೇಷ್ಠ ಸಂವಿಧಾನ. ಅಂತಹ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ರವರ ಜನ್ಮದಿನಾಚರಣೆಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿ ನಡೆಯುವ ಸ್ಥಳದಲ್ಲಿ ನೂರಾರು ಕಾರ್ಮಿಕರ ಸಮಕ್ಷಮದಲ್ಲಿ ಆಚರಣೆ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮೇ 10 ನಡೆಯುವ ವಿಧಾನಸಭೆ ಚುನಾವಣೆಗೆ ತಮ್ಮ ಅಮೂಲ್ಯವಾದ ಮತವನ್ನು ಕಡ್ಡಾಯವಾಗಿ ಚಲಾಯಿಸುವಂತೆ ಹಾಗೂ ಮತದಾನದಿಂದ ಯಾರು ಹೊರಗೆ ಉಳಿಯದಂತೆ ಮಾಹಿತಿ ನೀಡಿದ ಅವರು ಗ್ರಾಮದಿಂದ ಉದ್ಯೋಗ ನಿಮಿತ್ಯ ಬೇರೆ ಗ್ರಾಮಗಳಿಗೆ ವಲಸೆ ಹೋಗಿರುವವರನ್ನು ಕಡ್ಡಾಯವಾಗಿ ಅಂದು ಗ್ರಾಮಕ್ಕೆ ಹಾಗೂ ತಮ್ಮ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಕೋರಿಕೊಂಡು ಮತದಾನದ ಕುರಿತು ಪ್ರತಿಜ್ಞಾವಿಧಿ ಭೋದಿಸಿದರು.

ಈ ಸಂದರ್ಭದಲ್ಲಿ ಹೊಳೆಮಣ್ಣೂರ ಹಾಗೂ ಹೊಳೆ ಆಲೂರು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ನೂರಾರು ಕೂಲಿ ಕಾರ್ಮಿಕರು ಹಾಜರಿದ್ದರು.