
ಬಳ್ಳಾರಿ, ಏ.23: ಉತ್ತಮ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ನಿಮ್ಮ ಮತ ಅತ್ಯಾವಶ್ಯಕವಾಗಿದ್ದು, ಮತದ ಮೌಲ್ಯ ಮತ್ತು ಶ್ರೇಷ್ಠತೆ ಬಗ್ಗೆ ಅರಿತುಕೊಂಡು ಮತ ಚಲಾಯಿಸಿ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ನರೇಗಾ ಕಾರ್ಮಿಕರಿಗೆ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಶುಕ್ರವಾರ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ದೇವಲಾಪುರ ಕೆರೆಯಲ್ಲಿ ನರೇಗಾ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ಜನರು ಯಾವುದೇ ಹಣ, ಉಡುಗೊರೆ, ಇತರೆ ಆಕರ್ಷಕ ವಸ್ತುಗಳಿಗೆ ಮರುಳಾಗದೇ, ಪ್ರತಿಯೊಬ್ಬರು ನೈತಿಕ ಮತದಾನ ಮಾಡಬೇಕೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಯೋಜನಾ ನಿರ್ದೇಶಕ ಪ್ರಮೋದ್, ತಾಪಂ ಇಒ ಮಡಗಿನ ಬಸಪ್ಪ, ಉದ್ಯೋಗ ಖಾತ್ರಿಯ ಸಹಾಯಕ ನಿರ್ದೇಶಕರು, ತಾಲ್ಲೂಕಿನ ಎಲ್ಲಾ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಸೇರಿದಂತೆ 400 ಕ್ಕೂ ಹೆಚ್ಚು ನರೇಗಾ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಚಿಗರು ಕಲಾ ತಂಡ ಮತ್ತು ಸನ್ಮಾರ್ಗ ಗೆಳೆಯರ ಬಳಗದಿಂದ ಮತದಾನದ ಜಾಗೃತಿ ಗೀತೆಗಳು ಮತ್ತು ಮತದಾನದ ಮಹತ್ವದ ಬಗ್ಗೆ ಬೀದಿ ನಾಟಕವನ್ನು ಪ್ರದರ್ಶಿಸಿದರು.