ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣಾ ಶಿಬಿರ:ಒಟ್ಟು 1,250 ಜನ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ

ಕಲಬುರಗಿ,ಮೇ.25:ಕಲಬುರಗಿ ತಾಲೂಕು ಪಂಚಯತ್ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣಾ ಕೌಲಗಿ ಇವರ ನೇತೃತ್ವದಲ್ಲಿ ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ, ಹಾಗರಗಾ, ಭೂಪಾಲ ತೆಗನೂರ, ಪಟ್ಟಣ, ಹಾಗೂ ಸರಡಗಿ(ಬಿ) ಗ್ರಾಮ ಪಂಚಾಯಿತಿಗಳಲ್ಲಿನ ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಬುಧವಾರ ಹಮ್ಮಿಕೊಳ್ಳಲಾಯಿತು.
ಆರೋಗ್ಯ ಅಮೃತ ಅಭಿಯಾನದಡಿ ಕೂಲಿ ಕಾರ್ಮಿಕರರಿಗೆ ಅವರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಸ್ಥಳದಲ್ಲಿಯೇ 500 ಜನ ಮಹಿಳೆಯರು, 750 ಪುರುಷರು ಸೇರಿದಂತೆ ಒಟ್ಟು 1250 ಜನ ಕೂಲಿ ಕಾರ್ಮಿಕರ ಆರೋಗ್ಯವನ್ನು ತಪಾಸಣೆ ನಡೆಸಲಾಯಿತು. ಕೂಲಿ ಕಾರ್ಮಿಕರು ತಮ್ಮ ದೇಹದ ಆರೋಗ್ಯ ಉತ್ತಮವಾಗಿ ಇಟ್ಟುಕೊಳ್ಳಬೇಕು.
ಈ ಶಿಬಿರದಲ್ಲಿ ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ, ಕಣ್ಣಿನ ಪರೀಕ್ಷೆ ಹಲ್ಲು ಪರೀಕ್ಷೆ ಇನ್ನು ಮುಂತಾದ ಪರೀಕ್ಷೆಗಳನ್ನು ಏಕ ಕಾಲಕ್ಕೆ ಮಾಡಲಾಯಿತು. ಕಲಬುರಗಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣಾ ಕೌಲಗಿ, ಪಂಚಾಯತ್‍ರಾಜ್ ಸಹಾಯಕ ನಿರ್ದೇಶಕ ವಿಶ್ವನಾಥ ಎಮ್ ವೈ, ನರೇಗಾ ಸಹಾಯಕ ನಿರ್ದೇಶಕ ರೇವಣಸಿದ್ದಪ್ಪ ಗೌಡರ್, ಸದರಿ ಗ್ರಾಮ ಪಂಚಾಯತಿಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಗ್ರಾಮ ಪಂಚಾಯತಿಗಳ ಸಿಬ್ಬಂದಿ ವರ್ಗಗಳು ಉಪಸ್ಥಿತರಿದ್ದರು.