ನರೇಗಾ ಕಾರ್ಮಿಕ ಸಾವು

ಹೂವಿನಹಡಗಲಿ ಜ 08 : ಉದ್ಯೋಗ ಖಾತ್ರಿ ಯೋಜನೆ ಅಡಿ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿದ್ದ ವೇಳೆ ನರೇಗಾ ಕಾರ್ಮಿಕ ಮೃತಪಟ್ಟಿರುವ ಘಟನೆ ತಾಲೂಕಿನ ಉಪನಾಯಕನಹಳ್ಳಿ ಕೆರೆಯಲ್ಲಿ ಜರುಗಿದೆ.
ಹಗರನೂರು ಗ್ರಾಮದ ಈಡಿಗರ ನಿಂಗಪ್ಪ (38) ಮೃತ ಕಾರ್ಮಿ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ.
ತಾಲೂಕಿನ ದೇವಗೊಂಡನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಉಪನಾಯನಹಳ್ಳಿಯಲ್ಲಿ ನರೇಗಾ ಯೋಜನೆ ಅಡಿ ಕೈಗೆತ್ತಿಕೊಂಡಿರುವ ಜಿನುಗು ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಕಾರ್ಮಿಕ ನಿಂಗಪ್ಪ ಕೂಲಿ ಕೆಲಸಕ್ಕೆ ತೆರಳಿದ್ದನು. ಈ ವೇಳೆ ಆಳವಾದ ಗುಂಡಿಯಲ್ಲಿ ಮಣ್ಣು ಅಗೆಯುವಾಗ ಒಂದು ಬದಿಯ ದಿಬ್ಬ ಕಳಚಿ ಬಿದ್ದು, ಕಾರ್ಮಿಕ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದರು. ಕೂಡಲೇ ಸ್ಥಳದಲ್ಲಿದ್ದವರು ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ ಕಾರ್ಮಿಕನನ್ನು ಹೊರ ತೆಗೆದಿದ್ದಾರೆ. ಗ್ರಾ.ಪಂ. ಸಿಬ್ಬಂದಿ ಅಸ್ವಸ್ಥ ಕಾರ್ಮಿಕನನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸಿದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕೆರೆ ಹೂಳೆತ್ತುವ ಕಾಮಗಾರಿಯ ವೇಳೆ ಮಣ್ಣು ಕುಸಿದು ಕಾರ್ಮಿಕ ನಿಂಗಪ್ಪ ಮೃತಪಟ್ಟಿರುವ ಘಟನೆ ತೀರಾ ಕಳವಳಿಕಾರಿಯಾಗಿದೆ. ನರೇಗಾ ನಿಯಮಾನುಸಾರ ಮೃತ ಕಾರ್ಮಿಕನ ಕುಟುಂಬಕ್ಕೆ 75 ಸಾವಿರ ರೂ. ಪರಿಹಾರವನ್ನು ವಿತರಿಸಲಿದ್ದೇವೆ’ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಯು.ಹೆಚ್.ಸೋಮಶೇಖರ ತಿಳಿಸಿದರು.