
ಗದಗ,ಮೇ.16: ಗದಗ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ ಅವರು ತಾಲೂಕಿನ ಲಕ್ಕುಂಡಿ ಹಾಗೂ ಹರ್ತಿ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು.
ನಂತರ ನರೇಗಾ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ರೈತರಿಗೆ ಹಾಗೂ ಬಡವರಿಗೆ ಅನುಕೂಲವಾಗಿದೆ ಆದ್ದರಿಂದ ಎಲ್ಲರೂ ಇದರ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು.
ಮುಖ್ಯವಾಗಿ ನರೇಗಾ ಯೋಜನೆಯಡಿ ಎಲ್ಲ ಕೂಲಿಕಾರರು ಭಾಗವಹಿಸಿ ಸಾರ್ವಜನಿಕ ಆಸ್ತಿಗಳನ್ನು ಸೃಜನೆ ಮಾಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ ಎಂದರು.
ಮಹಿಳೆಯರಿಗೆ ಹಾಗೂ ಪುರುಷರಿಗೆ ಸಮಾನ ಕೂಲಿ ರೂ.316 ಗಳನ್ನು ಒದಗಿಸಲಾಗುತ್ತಿದೆ. ಪ್ರತಿ ಕುಟುಂಬಕ್ಕೆ ಒಂದು ವರ್ಷದಲ್ಲಿ 100 ದಿನಗಳಂತೆ ಉದ್ಯೋಗ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಜನರು ಉದ್ಯೋಗವನ್ನರಸಿ ಬೇರೆ ರಾಜ್ಯ,ಜಿಲ್ಲೆ, ನಗರಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ತಾವೆಲ್ಲರೂ ನಿಮ್ಮ ಸ್ವಂತ ಊರಿನಲ್ಲಿಯೇ ಇದ್ದು ಉದ್ಯೋಗ ಮಾಡಿ ಕೂಲಿ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ತಾ. ಪಂ. ಸಹಾಯಕ ನಿರ್ದೇಶಕ (ಗ್ರಾ. ಉ), (ಪಂ. ರಾ), ಪಿ ಡಿ ಓ, ನರೇಗಾ ಸಿಬ್ಬಂದಿಗಳು, ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.