ನರೇಗಾ: ಉತ್ತಮ ಸಾಧನೆಗೈದ ಅಧಿಕಾರಿಗಳಿಗೆ ಪುರಸ್ಕಾರ

ಪುತ್ತೂರು-ಕಡಬ ತಾಲೂಕಿನ ೬ ಅಧಿಕಾರಿಗಳಿಗೆ ಗೌರವಾರ್ಪಣೆ

ಪುತ್ತೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ೨೦೧೯-೨೦ ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಅನುಷ್ಠಾನ ಮಾಡಿರುವ ಆರು ಅಧಿಕಾರಿಗಳಿಗೆ ಗುರುವಾರ ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮ ಪಂಚಾಯತ್ ನ ಆವರಣದಲ್ಲಿ ನಡೆದ ನೂತನ ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ ಹಾಗೂ ಸ್ವಚ್ಛ ಸಂಕೀರ್ಣದ ಏಕರೂಪದ ಬ್ರಾಂಡಿಂಗ್ ಲೋಕಾರ್ಪಣೆ ಜಿಲ್ಲಾ ಮಟ್ಟದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು.
ಸಾಧನೆಗೈದ ಅಧಿಕಾರಿಗಳು
ಪುತ್ತೂರು ತಾಲೂಕಿನ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವ ಪ್ರಕಾಶ್, ಬಲ್ನಾಡು ಗ್ರಾ.ಪಂ. ಪಿಡಿಒ ಷರೀಫ್, ಸುಬ್ರಹ್ಮಣ್ಯ ಗ್ರಾ.ಪಂ. ಪಿಡಿಒ ಮುತ್ತಪ್ಪ, ಕಡಬ ತಾ.ಪಂ. ಸಿವಿಲ್ ತಾಂತ್ರಿಕ ಸಹಾಯಕ ಅಭಿಯಂತರ ಮನೋಜ್ ಕುಮಾರ್, ತೋಟಗಾರಿಕೆ ತಾಂತ್ರಿಕ ಸಹಾಯಕ ಅಭಿಯಂತರ ಪ್ರಶಾಂತಿ ಬಿ. ಎಸ್. ಹಾಗೂ ಪುತ್ತೂರು ತಾಲೂಕು ಟಿ ಎಂ ಐ ಎಸ್ ಸಂಯೋಜಕ ನಿಶಿತ್ ಕುಮಾರ್ ಶೆಟ್ಟಿ ಅವರನ್ನು ಕಾರ್ಯಕ್ರಮದಲ್ಲಿ ಗಣ್ಯರು ಸಾಧನಾ ಪ್ರಶಸ್ತಿ ಫಲಕ ಮತ್ತು ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದರು.

ಈ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಶಾಸಕ ಎ. ಉಮಾನಾಥ ಕೋಟ್ಯಾನ್, ದ.ಕ.ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೂಡುಬಿದಿರೆ ತಾ.ಪಂ.ಅಧ್ಯಕ್ಷೆ ರೇಖಾ ಸಾಲ್ಯಾನ್, ಉಪಾಧ್ಯಕ್ಷ ಸಂತೋಷ ಬಿ., ಜಿ.ಪಂ. ಸದಸ್ಯೆ ಕೆ.ಪಿ.ಸುಚರಿತ ಶೆಟ್ಟಿ, ತಾ.ಪಂ. ಸದಸ್ಯೆ ವನಿತಾ ನಾಯ್ಕ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ಡಾ. ಸೆಲ್ವಮಣಿ, ಜಿ.ಪಂ. ಉಪಕಾರ್ಯದರ್ಶಿ ಆನಂದ ಕುಮಾರ್, ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಕಾರಿ ಅಭಿಯಂತರ ನರೇಂದ್ರ, ಜಿ.ಪಂ.ಜೆಇಇ ಜಗದೀಶ ಶೆಟ್ಟಿ. ಜಿಲ್ಲಾ ನೆರವು ಘಟಕದ ಸಂಯೋಜಕಿ ಮಂಜುಳಾ, ಮೂಡುಬಿದಿರೆ ತಾ.ಪಂ. ಇಒ ದಯಾವತಿ, ಪುತ್ತಿಗೆ ಪಿಡಿಒ ಸುನಿತಾ ಸಾಲ್ಯಾನ್, ಎಸ್‌ಬಿಎಂ ಎಚ್‌ಆರ್‌ಡಿ ನವೀನ್, ಐಇಸಿ ಡೊಂಬಯ್ಯ, ಎನ್‌ಆರ್‌ಇಜಿ ಐಇಸಿ ವಿನಿಷಾ, ಸಂಜೀವ ಮತ್ತಿತರರು ಉಪಸ್ಥಿತರಿದ್ದರು.