ನರೇಗಾದಡಿ ಕಾಮಗಾರಿ, ಕೂಲಿ ಕೆಲಸ ಬೇಡಿಕೆ ಸ್ವೀಕಾರ ಅಭಿಯಾನ

ಗದಗ, ಸೆ1 : ಗದಗ ಜಿಲ್ಲೆಯಲ್ಲಿ ನರೇಗಾದಡಿ ಉದ್ಯೋಗ ಅರಸಿ ಜಿಲ್ಲೆಯ ಜನರು ಬೇರೋಂದು ಪ್ರದೇಶಕ್ಕೆ ವಲಸೆ (ಗುಳೆ) ಹೋಗುವುದನ್ನು ತಡೆಯುವ ಹಾಗೂ ವೈಯಕ್ತಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಕೇಂದ್ರ ಸರ್ಕಾರದ ಯೋಜನೆಯಾದ ಮಹಾತ್ಮಗಾಂಧಿ ನರೇಗಾದಡಿ ಜಿಲ್ಲೆಯಲ್ಲಿ ಮನೆ ಮನೆಗೆ ತೆರಳಿ ವೈಯಕ್ತಿಕ ಕಾಮಗಾರಿ ಮತ್ತು ಕೂಲಿ ಕೆಲಸ ಬೇಡಿಕೆ ಸ್ವೀಕರಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿಗಳಾದ ಸಿ. ಆರ್. ಮುಂಡರಗಿ ತಿಳಿಸಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೋಂದಾಯಿತ ಗ್ರಾಮೀಣ ಕುಟುಂಬದ ಸದಸ್ಯರಿಗೆ ಪ್ರತಿ ವರ್ಷ 100 ದಿನಗಳ ಉದ್ಯೋಗ ಒದಗಿಸಲಾಗುತ್ತದೆ. ಈ ಯೋಜನೆಯಡಿ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗದಂತೆ ತಡೆಗಟ್ಟಲು ಹಾಗೂ ಜನರಿಗೆ ತಮ್ಮ ಸ್ವಗ್ರಾಮದಲ್ಲಿಯೇ ಉದ್ಯೋಗ ಒದಗಿಸಿ ಆರ್ಥಿಕವಾಗಿ ಸಬಲರಾಗಲು, ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಆಸ್ತಿ ಸೃಜನೆ ಮಾಡುವ ಉದ್ದೇಶದಿಂದ ಸ್ಥಳೀಯವಾಗಿ ಉದ್ಯೋಗ ನೀಡಿ ಗಂಡು-ಹೆಣ್ಣು ಎಂಬ ಬೇಧವಿಲ್ಲದೆ ಸಮಾನವಾಗಿ ಪ್ರತಿ ದಿನಕ್ಕೆ 316/- ರೂ ಕೂಲಿ ನೀಡಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ಗ್ರಾಮೀಣ ರೈತರು ಸ್ಥಳೀಯವಾಗಿ ಉದ್ಯೋಗ ಖಾತ್ರಿಯೋಜನೆಡಿ ಕೆಲಸ ನೀಡಲು ಮನೆ ಮನೆಗೆ ತೆರಳಿ ಜನರ ಉದ್ಯೋಗ ಬೇಡಿಕೆ ಪತ್ರವನ್ನು ಸ್ವೀಕರಿಸಿದ್ದರಿಂದ ಆಯುಕ್ತಾಲಯದ ಗುರಿಗೆ ನರೇಗಾದಡಿ ಶೇಕಡಾ 100% ಹೆಚ್ಚು ಪ್ರಗತಿ ಸಾಧಿಸಲು ಸಾಧ್ಯವಾಗಿದ್ದು ಮುಂದೆಯೂ ಸಹ ಹೆಚ್ಚಿನ ಪ್ರಗತಿ ಸಾಧಿಸಲು ಯೋಜನೆಯಡಿ ಜಿಲ್ಲೆಯಲ್ಲಿ ಮನೆ ಮನೆಗೆ ತೆರಳಿ ಕಾಮಗಾರಿ ಅಥಾವ ಕೂಲಿ ಕೆಲಸ ಬೇಡಿಕೆ ಸ್ವೀಕರಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಏಳು ತಾಲೂಕುಗಳಲ್ಲಿನ ಗ್ರಾಮಗಳಲ್ಲಿ ನೋಂದಾಯಿತ ಕುಟುಂಬಗಳ ಮನೆ ಮನೆಗೆ ತೆರಳಿ ಕೂಲಿಕಾರರಿಗೆ ಹಾಗೂ ರೈತರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮತ್ತು ವೈಯಕ್ತಿಕ ಕೆಲಸಗಳನ್ನು ನೀಡುವ ಕುರಿತು ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.